ಬೆಂಗಳೂರು: ನೀವು ಮಾಡಿದ ಪಾಪ ಎಲ್ಲಿಗೇ ಹೋದರೂ ಕಳೆಯಲ್ಲ ಎಂದು ಅಭಿಪ್ರಾಯಪಟ್ಟ ಕರ್ನಾಟಕ ಹೈಕೋರ್ಟ್ ವಿದ್ವತ್ ಮೇಲಿನ ಹಲ್ಲೆ ಪ್ರಕರಣ ಆರೋಪಿ ಮೊಹಮ್ಮದ್ ನಲಪಾಡ್ ಗೆ ಮಕ್ಕಾಗೆ ತೆರಳಲು ಅನುಮತಿ ನಿರಾಕರಿಸಿದೆ.
ಶಾಸಕ ಹಾರೀಸ್ ಪುತ್ರ ಮೂಹಮ್ಮದ್ ನಲಪಾಡ್ ತಾವು ಮಕ್ಕಾಗೆ ತೆರಳಬೇಕೆಂದು ಬಯಸಿದ್ದು ಅದಕ್ಕಾಗಿ ತಮ್ಮ ಜಾಮೀನಿನ ಷರತ್ತುಗಳನ್ನು ಸಡಿಸಿಲುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಸಂಬಂಧ ಶುಕ್ರವಾರ ವಿಚಾರಣೆ ನಡೆಸಿದ್ದ ನ್ಯಾಯಾಲಯ ಅವರ ಮನವಿಯನ್ನು ತಿರಸ್ಕರಿಸಿದ್ದು ಮುಂದಿನ ವಿಚಾರಣೆಯನ್ನು ಮೇ 14ಕ್ಕ ನಿಗದಿಗೊಳಿಸಿದೆ.
ಹೈಕೋರ್ಟ್ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ನ್ಯಾಯಪೀಠ ನಲಪಾಡ್ ಅವರ ಅರ್ಜಿ ವಿಚಾರಣೆ ನಡೆಸಿದೆ.
ನಲಪಾಡ್ ಪರ ವಕೀಲರು ನ್ಯಾಯಲಯಕ್ಕೆ ಹಾಜರಾಗಿ "ತಮ್ಮ ಕಕ್ಷಿದಾರರು ಇಪ್ಪತ್ತು ದಿನಗಳ ಕಾಲ ಮಕ್ಕಾಗೆ ತೆರಳುವವರಿದ್ದಾರೆ. ಹಾಗಾಗಿ ಅವರ ಜಾಮೀನು ಷರತ್ತುಗಳನ್ನು ಸಡಿಲಿಸಬೇಕು" ಎಂದು ಮನವಿ ಮಾಡಿದ್ದರು.ಆಗ ನಲಪಾಡ್ ವಿರುದ್ಧ ಯಾವ ಆರೋಪವಿದೆ ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ. ಆಗ ವಕೀಲರು ಸೆಕ್ಷನ್ 307(ಕೊಲೆ ಯತ್ನ) ಆರೋಪವಿದೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಯಿಸಿದ ನ್ಯಾಯಾಲಯ "ನೀವು ಮಾಡಿದ ಪಾಪ ಎಲ್ಲಿಗೇ ಹೋದರೂ ತೂಳೆದು ಹೋಗಲ್ಲ ಬಿಡಿ" ಎಂದು ಚಾಟಿ ಬೀಸಿದ್ದಾರೆ.
ಅನಂತರ ಮತ್ತೆ ನ್ಯಾಯಾಲಯವು ಒಂದು ವೇಳೆ ಸರ್ಕಾರಿ ವಕೀಲರು ನಲಪಾಡ್ ಮೆಕ್ಕಾಗೆ ತೆರಳಲು ಆಕ್ಶೇಪವಿಲ್ಲ ಎಂದಿದ್ದಾದರೆ ಆಗ ಪರಿಶೀಲನೆ ಮಾಡಲಾಗುವುದು ಎಂದು ಹೇಳಿ ವಿಚಾರಣೆ ಮುಂದೂಡಿದೆ.