ಕಾಸರಗೋಡು: ಹಣ್ಣುಗಳ ರಾಜನ ಲೋಕಕ್ಕೆ ಕದತೆರೆದು ಪಡನ್ನಕ್ಕಾಡ್ ಕೃಷಿ ಕಾಲೇಜು ವೈವಿಧ್ಯಮಯ ಮಾವಿನ ಹಣ್ಣುಗಳ ಮಹೋತ್ಸವ ಮೂಲಕ ನಾಡಿನ ಗಮನ ಸೆಳೆದಿದೆ.
"ಮಲಬಾರ್ ಮ್ಯಾಂಗೋ ಫೆಸ್ಟ್ ಮಧುರಂ-2019" ಎಂಬ ಹೆಸರಿನಲ್ಲಿ ನಡೆಯುತ್ತಿರುವ ಮಾವಿನಣ್ಣುಗಳ ಮಹೋತ್ಸವದಲ್ಲಿ ಸ್ಥಳೀಯ ಮತ್ತು ವಿವಿಧ ಕಡೆಗಳ ವೈವಿಧ್ಯಮಯ ಮಾವಿನಹಣ್ಣುಗಳ ಪ್ರದರ್ರಶನ ಮತ್ತು ಮಾರಾಟ ನಡೆದಿದೆ. ಕೃಷಿ ಕಾಲೆಜಿನ ಉತ್ಪನ್ನವಾಗಿರುವ ಫಿರಂಗಿ ಲಡುವ ದಿಂದ ತೊಡಗಿ ಅತ್ಯಧಿಕ ಬೆಲೆ ಹೊಂದಿರುವ ಅಲ್ಫೋನ್ಸಾ, ಸಿಂಧೂರಂ, ನೀಲಂ, ಮುಂಡಪ್ಪ, ಮೆಕ್ರ್ಯೂರಿ, ಸುವರ್ಣ ರೇಖೆ, ಕರ್ಪೂರ, ಬಂಗೋರ ಸಹಿತ 20ಕ್ಕೂ ಅಧಿಕ ಮಾವಿನಹಣ್ಣುಗಳು ಇಲ್ಲಿ ಹಣ್ಣು ಪ್ರಿಯರನ್ನು ಸೆಳೆದುವು.
ಕಾಲೇಜು ವಿದ್ಯಾರ್ಥಿ ಯೂನಿಯನ್ ನೇತೃತ್ವದಲ್ಲಿ ಇಲ್ಲಿ ಮಾವಿನ ಹಣ್ಣುಗಳ ಮಹೋತ್ಸವ ನಡೆಯುತ್ತಿದೆ. 2004ರಿಂದ ಯೂನಿಯನ್ ನೇತೃತ್ವದಲ್ಲಿ ಇಲ್ಲಿ ಮ್ಯಾಂಗೋ ಫೆಸ್ಟ್ ನಡೆದಿದೆ. ಆರಂಭದ ಹಂತದಲ್ಲಿ ಕಾಲೇಜು ಆವರಣದಲ್ಲಿ ನೆಟ್ಟು ಬೆಳೆಸಿದ ಮಾವಿನಹಣ್ಣುಗಳ ಪ್ರದರ್ಶನ ಮಾತ್ರ ನಡೆಯುತ್ತಿತ್ತು. ನಂತರದ ವರ್ಷಗಳಲ್ಲಿ ಬೇಡಿಕೆದಾರರ ಬಯಕೆಯ ಹಿನ್ನೆಲೆಯಲ್ಲಿ ಕಣ್ಣೂರು ಸಹಿತ ಜಿಲ್ಲೆಗಳಿಂದ ವೈವಿಧ್ಯಮಯ ಮಾವಿನಹಣ್ಣುಗಳು ಇಲ್ಲಿಗೆ ರವಾನೆಗೊಳ್ಳುತ್ತಿವೆ. ಕಳೆದ ವರ್ಷ ನಡೆದಿದ್ದ ಮ್ಯಾಂಗೋ ಫೆಸ್ಟ್ ನಲ್ಲಿ 7 ಟನ್ ಮಾವಿನ ಹಣ್ಣುಗಳ ಮಾರಾಟ ನಡೆದಿದೆ.
ಕಾಲೇಜು ಆವರಣದಲ್ಲೇ ಸರಿಸುಮಾರು 150ಕ್ಕೂ ಅಧಿಕ ಮಾವಿನ ಮರಗಳಿದ್ದು, 20 ಜಾತಿಯ ಮಾವಿನಹಣ್ಣುಗಳನ್ನು ಬೆಳೆಯಲಾಗುತ್ತಿದೆ. ಅತ್ಯಧಿಕ ಗಾತ್ರದ ಗುದಾದ್ ಮಾವಿನ ಹಣ್ಣು ಇಲ್ಲಿ ಗಮನಾರ್ಹವಾಗಿದೆ. ಒಂದು ಹಣ್ಣು 600 ಗ್ರಾಂ ನಿಂದ 800 ಗ್ರಾಂ ತೂಕ ಹೊಂದಿದೆ. ಕಿಲೋಗೆ 60 ರೂ.ನಿಂದ 130 ರೂ.ಬೆಲೆಯನ್ನು ಈ ಹಣ್ಣು ಹೊಂದಿದೆ.
ಕಾಲೇಜಿನ ಇತರ ವಿಭಾಗಗಳ ನೇತೃತ್ವದಲ್ಲಿ ವಿವಿಧ ಕೃಷಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವೂ ಇಲ್ಲಿದೆ. ಬೇರೆ ಬೇರೆ ಹಣ್ಣುಗಳು, ಪುರಾತನ ಕೃಷಿ ಉಪಕರಣಗಳು, ಸಾಕು ಹಕ್ಕಿಗಳು,ಮೀನುಗಳು, ನರ್ಸರಿ ಸಸ್ಯಗಳು ಇತ್ಯಾದಿ ಗಮನ ಸೆಳೆದಿವೆ. ಪ್ರದರ್ಶನ ಅಂಗವಾಗಿ ವಿಚಾರಸಂಕಿರಣ, ಸ್ಥಳೀಯ ಮಾವಿನಹಣ್ಣುಗಳ ಕುರಿತಾದ ಸ್ಪರ್ಧೆಗಳು ಮೊದಲಾದುವು ನಡೆದಿವೆ. ಪ್ರತಿದಿನ ನೂರಾರು ಮಂದಿ ಕೃಷಿ ಪ್ರೇಮಿಗಳು ಈ ಪ್ರದರ್ಶನ ಈಕ್ಷಿಸಲು ಆಗಮಿಸಿದ್ದರು. ಫಿರಂಗಿ ಲಡುವ, ಸಿಂಧೂರಂ, ಮುಂಡಪ್ಪ ಜಾತಿಯ ಮಾವಿನಹಣ್ಣುಗಳಿಗೆ ಇಲ್ಲಿ ಅತಿ ಬೇಡಿಕೆ ಪಡೆದಿದ್ದುವು ಎಂದು ಸಂಘಟಕರು ಅಭಿಪ್ರಾಯಪಟ್ಟಿದ್ದಾರೆ.
ಮ್ಯಾಂಗೋ ಫೆಸ್ಟ್ ಇಂದು (ಮೇ 5) ಸಮಾರೋಪಗೊಳ್ಳಲಿದೆ. ಮೇ 2ರಂದು ಮಹೋತ್ಸವ ಆರಂಭಗೊಂಡಿದ್ದು, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸಿದ್ದರು.