ಉಪ್ಪಳ: ಅಭಿನಂದನಾ ಗ್ರಂಥಗಳು ವ್ಯಕ್ತಿಯ ಸ್ತುತಿ ಬರಹಗಳಾಗದೇ ಕಾಲಘಟ್ಟದ ಚರಿತ್ರೆಗಳ ದಾಖಲಾತಿಗಳಾಗಬೇಕು. ಅಭಿನಂದನಾ ಗ್ರಂಥಗಳಿಗೆ ಲೇಖನ ಬರೆಯುವವರು ಉತ್ಪ್ರೇಕ್ಷಿತ ಪ್ರಶಂಸಾ ಬರಹಗಳಿಗಿಂತ ಅಪೂರ್ವ ದಾಖಲಾತಿಯತ್ತ ಗಮನಹರಿಸಬೇಕು. ಹೀಗಾದರೆ ಕೃತಿಯು ಸಾರ್ವಕಾಲಿಕ ಮೌಲ್ಯ ಪಡೆಯುತ್ತದೆ. ಈ ನಿಟ್ಟಿನಲ್ಲಿ ಬಾಯಾರು ರಮೇಶ ಶೆಟ್ಟರ ಅಭಿನಂದನಾ ಗ್ರಂಥವು 80-90ರ ದಶಕದ ಪೈವಳಿಕೆ -ಬಾಯಾರು ಪರಿಸರದಲ್ಲಿ ನಡೆದ ಯಕ್ಷಗಾನ ಪ್ರಯೋಗಶೀಲತೆಗಳನ್ನು ದಾಖಲಿಸಿದೆ. ತನ್ಮೂಲಕ ಕೃತಿಯು ವೈವಿಧ್ಯತೆಯಿಂದ ಸಂಪನ್ನವಾಗಿದೆ ಎಂದು ಪತ್ರಕರ್ತ ಎಂ.ನಾ. ಚಂಬಲ್ತಿಮಾರ್ ನುಡಿದರು.
'ಯಕ್ಷರಮೇಶ 60ರ ಹೆಜ್ಜೆ'ಯಂಗವಾಗಿ ಕಲಾವಿದ ಬಾಯಾರು ರಮೇಶ ಶೆಟ್ಟರ ಕಲಾಯಾನದ ಸುವರ್ಣಮಹೋತ್ಸವ ಮತ್ತು ಜೀವನದ ಷಷ್ಟಿಪೂರ್ತಿಯಂಗವಾಗಿ ಮೇ 25,26ರಂದು ಮುಳಿಗದ್ದೆಯ ಹೆದ್ದಾರಿ ಶಾಲೆಯಲ್ಲಿ ನಡೆದ ಅಭಿನಂದನಾ ಸಮಾರಂಭ ಮತ್ತು ಶಿಷ್ಯಸಮಾವೇಶದಂಗವಾಗಿ ಹೊರತಂದ ಅಭಿನಂದನಾ ಗ್ರಂಥ 'ಸವ್ಯಸಾಚಿ'ಯ ಬಿಡುಗಡೆ ಸಮಾರಂಭದಲ್ಲಿ ಕೃತಿಯ ಕುರಿತು ಅವರು ಮಾತನಾಡಿದರು.
ಕಲಾವಿದ ರಮೇಶ ಶೆಟ್ಟಿ ಅವರ ಮಾತೃಶ್ರೀ ಕಲ್ಯಾಣಿಯಮ್ಮ ಅವರು ಪುಸ್ತಕ ಬಿಡುಗಡೆ ಮಾಡಿದರು. ಕಣಿಪುರ ಯಕ್ಷಗಾನ ಮಾಸಪತ್ರಿಕೆಯ ಸಂಪಾದಕ ಎಂ.ನಾ.ಚಂಬಲ್ತಿಮಾರ್ ಅವರ ಸಂಪಾದಕತ್ವದಲ್ಲಿ ಅಭಿನಂದನಾ ಗ್ರಂಥ ರಚಿಸಲಾಗಿದೆ. ಕೃತಿಯಲ್ಲಿ 'ನಾನೇ ಹೇಳುವ ನನ್ನಕತೆ' ಎಂಬ ಶೀರ್ಷಿಕೆಯಲ್ಲಿ ರಮೇಶ ಶೆಟ್ಟರ ಜೀವನಗಾಥೆ, ಬಳಿಕ ಕಲಾದೃಷ್ಟಿ-ಧೋರಣೆಯ ಅವರ ಸಂದರ್ಶನ, ಆಪ್ತರ, ಶಿಷ್ಯರ 30ಲೇಖನಗಳು ಒಳಗೊಂಡಿವೆ. ಅಭಿನಂದನಾ ಸಮಿತಿ ಅಧ್ಯಕ್ಷ ಕುರಿಯ ಗೋಪಾಲಕೃಷ್ಣ ಭಟ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಹೆದ್ದಾರಿ ಎಯುಪಿ ಶಾಲಾ ಪ್ರಬಂಧಕ ರಾಜೇಶ್ ನಿಡುವಜೆ, ಶಾಲಾ ಮುಖ್ಯೋಪಾದ್ಯಾಯ ಆದಿನಾರಾಯಣ ಭಟ್, ಕಲಾವಿದ ರಮೇಶ ಶೆಟ್ಟಿ ಬಾಯಾರು, ಅಭಿನಂದನಾ ಸಮಿತಿ ಪ್ರ.ಕಾರ್ಯದರ್ಶಿ ನ್ಯಾಯವಾದಿ ರಾಮಕೃಷ್ಣ ಭಟ್ ಪೆರುವೊಡಿ, ಡಾ. ರಾಮಕೃಷ್ಣ ಭಟ್, ಶೇಖರ ಶೆಟ್ಟಿ ಬಾಯಾರು ಉಪಸ್ಥಿತರಿದ್ದರು. ಗಣೇಶ್ ಭಟ್ ಬಾಯಾರು ನಿರೂಪಿಸಿದರು.