ಮಂಜೇಶ್ವರ: ತೊಟ್ಟೆತ್ತೋಡಿ ಬುಡ್ರಿಯದ ಶ್ರೀ ಮಲರಾಯ ಬಂಟ ದೈವಸ್ಥಾನ ಕ್ಷೇತ್ರದಲ್ಲಿ ಜೀರ್ಣೋದ್ಧಾರಗೊಂಡು ದೈವಗಳ ಪುನಃಪ್ರತಿಷ್ಠೆ ಬ್ರಹ್ಮಕಲಶೋತ್ಸವವು ತಂತ್ರಿವರ್ಯ ಬ್ರಹ್ಮಶ್ರೀ ಗೋವಿಂದ ಭಟ್ ಪೊಳ್ಳಕಜೆ ಯವರ ನೇತೃತ್ವದಲ್ಲಿ ವೇದಮೂರ್ತಿ ಬೋಳಂತಕೋಡಿ ರಾಮ ಭಟ್ ರವರ ಉಪಸ್ಥಿತಿಯಲ್ಲಿ ನೂರಾರು ಭಕ್ತಾದಿಗಳ ಪಾಲ್ಗೊಳ್ಳುವಿಕೆಯಲ್ಲಿ ಶುಕ್ರವಾರ ಸಂಭ್ರಮದಿಂದ ಜರಗಿತು. ವಿವಿಧ ವೈದಿಕ, ಧಾರ್ಮಿಕ, ಸಾಂಕೃತಿಕ ಕಾರ್ಯಕ್ರಮಗಳೊಂದಿಗೆ ಗಣ್ಯರನ್ನೊಳಗೊಂಡ ಧಾರ್ಮಿಕ ಸಭೆಗಳೊಂದಿಗೆ ಮೂರು ದಿನಗಳ ಕಾಲ ಜರಗಿದ ಬ್ರಹ್ಮಕಲಶೋತ್ಸವ ಸಮಾರಂಭ ಶ್ರೀ ಮಲರಾಯ ಭಂಟದೈವಗಳ ನೇಮೋತ್ಸವದೊಂದಿಗೆ ಸಂಪನ್ನಗೊಂಡಿತು.
"ಆರಾದನಾ ವ್ಯವಸ್ಥೆಯಿಂದ ಸಾಮಾಜಿಕ ನೆಮ್ಮದಿ"- ಧಾರ್ಮಿಕ ಸಭೆಯಲ್ಲಿ ಕೊಂಡೆವೂರು ಶ್ರೀ
ಸಂಜೆ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪಿ.ಆರ್.ಶೆಟ್ಟಿ ಪೊಯ್ಯೆಲು ಅವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಬ್ರಹ್ಮ ಶ್ರೀ ಗೋವಿಂದ ಭಟ್ ಪೊಳ್ಳಕಜೆ ದಿವ್ಯ ಉಪಸ್ಥಿತರಿದ್ದರು. ಸಭೆಯಲ್ಲಿ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ, ನಮ್ಮ ಹಿರಿಯರು ನಡೆಸಿಕೊಂಡು ಬಂದ ಸನಾತನ ಆರಾಧನಾ ವ್ಯವಸ್ಥೆಯಿಂದ ಸಾಮಾಜಿಕ ನೆಮ್ಮದಿ ಸಾಧ್ಯವಾಗಿದೆ. ಇಂದು ಔಷದದಿಂದ ವಾಸಿಯಾಗದ ಅದೆಷ್ಟೋ ಖಾಯಿಲೆಗಳು ಶ್ರದ್ಧಾ ಪೂರ್ವಕವಾಗಿ ನಡೆಸುವ ಪ್ರಾರ್ಥನೆ ಹಾಗೂ ಪ್ರಸಾದ ಸೇವನೆಯಿಂದ ವಾಸಿಯಾದ ನಿದರ್ಶನಗಳಿವೆ, ನಂಬಿಕೆಗೆ ಅಗಾಧವಾದ ಶಕ್ತಿಯಿದೆ, ಮಾನವನ ನೆಮ್ಮದಿಗೆ ಭಕ್ತಿ ಭಾವ ಅಗತ್ಯ, ದೇವರು ಕತೃವಾಗಿ ನಾವೆಲ್ಲ ಅವರ ಕೈಯ ಉಪಕರಣದಂತೆ, ದೇವರ ಅಸ್ತಿತ್ವದ ಬಗ್ಗೆ ಸಂಶಯ ಬೇಡ, ನಂಬಿಕೆಯಿಂದಲೇ ಬದುಕನ್ನು ಕಟ್ಟಿಕೊಳ್ಳಬೇಕು, ನಂಬಿಕೆ ಉಳಿಯಲು ಬೆಳೆಯಲು ಇಂಥಾ ಶ್ರದ್ಧಾ ಕೇಂದ್ರಗಳು ಉಳಿಯಬೇಕು ಬೆಳೆಯಬೇಕು ಎಂದರು.
ವೇದಮೂರ್ತಿ ರಾಮ ಭಟ್ ಬೋಳಂತಕೋಡಿ ಧಾರ್ಮಿಕ ಸಂದೇಶ ನೀಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಆಕೃತಿ ಪ್ರಿಂಟರ್ಸ್ ಮಂಗಳೂರು ಇದರ ಮಾಲಕ, ಪುಸ್ತಕ ಪ್ರಕಾಶಕ, ಸಾಹಿತಿ ನಾಗೇಶ್ ಕಲ್ಲೂರು ಮಾತನಾಡಿ ದೇವಸ್ಥಾನ ದೈವಸ್ಥಾನ ನಾಗಬನಗಳಂತಹ ಆರಾಧನಾಲಯಗಳನ್ನು ಜೀರ್ಣೋದ್ಧಾರ ಮಾಡುವ ಸಂದರ್ಭ ನಮ್ಮ ಪ್ರಕೃತಿ ಸಂಪತ್ತು ವನಸಂಪತ್ತು ನಾಶವಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ. ನೆಲ, ಜಲ, ಆಕಾಶ, ಅಗ್ನಿ, ವಾಯು ಪಂಚಭೂತ ಶಕ್ತಿಗಳನ್ನು ಉಳಿಸುವುದೇ ನಮ್ಮ ಆರಾದನಾ ಸಂಸ್ಕøತಿಯ ಉದ್ದೇಶ. ಆ ಬಗ್ಗೆ ನಮ್ಮ ಪೂರ್ವಜರಾದ ಕೃಷಿಕರು, ಋಷಿಗಳೂ ಗಣನೀಯ ಕೊಡುಗೆ ನೀಡಿದ್ದಾರೆ. ನಾವು ಮತ್ತೆ ಋಷಿ, ಕೃಷಿ ಪರಂಪರೆಗೆ ಮರಳಬೇಕಾಗಿದೆ. ಈ ನಿಟ್ಟಿನಲ್ಲಿ ದೈವ ದೇವಸ್ಥಾನಗಳು ಕಾರ್ಯ ಪ್ರವೃತ್ತವಾಗಬೇಕಾಗಿದೆ. ತನ್ಮೂಲಕ ಮುಂದಿನ ಪೀಳಿಗೆಗೆ ಆರೋಗ್ಯ ಪೂರ್ಣ ಸಮೃದ್ಧ ಪರಿಸರವನ್ನು ಕೈ ದಾಟಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ನಾರಾಯಣ ಹೆಗ್ಡೆ ಕೋಡಿಬೈಲು, ಚೇತನಾ ಎಂ, ಶ್ರೀಧರ ಶೆಟ್ಟಿ ಮುಟ್ಟ, ಬಾಲಕೃಷ್ಣ ರೈ ಬಾನೋಟ್ಟು, ಡಾ. ಶ್ರೀಧರ ಭಟ್ ಉಪ್ಪಳ, ಡಾ. ಡಿ.ಸಿ.ಚೌಟ ದರ್ಬೆ, ನ್ಯಾಯವಾದಿ ರಾಜಶೇಖರ ಎಸ್ , ಭಾಸ್ಕರ ರೈ ಮಂಜಲ್ತೋಡಿ, ಗೋಪಾಲ ಶೆಟ್ಟಿ ಅರಿಬೈಲು, ಕೃಷ್ಣಪ್ಪ ಪೂಜಾರಿ ದೇರಂಬಳ, ಕೃಷ್ಣ ಶಿವಕೃಪಾ ಕುಂಜತ್ತೂರು, ಅಶ್ವಥ್ ಪೂಜಾರಿ ಲಾಲ್ ಬಾಗ್, ಭಾಗವಹಿಸಿದ್ದರು.
ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷೆ ಪ್ರೇಮಾ ಕೆ ಭಟ್ ತೊಟ್ಟೆತ್ತೋಡಿ, ಹಾಗೂ ಆಹ್ವಾನಿತ ಗಣ್ಯರಾದ ತಿರುಮಲೇಶ್ವರ ಭಟ್ ಕಣಕ್ಕೂರು, ಸದಾನಂದ ರೈ ಕಳ್ಳಿಗೆ, ಡಾ.ಯಸ್ ಯನ್ ಭಟ್ ಮೀಯಪದವು, ಶಂಕರನಾರಾಯಣ ಭಟ್ ಅಢ್ಕತ್ತಿಮಾರು, ಲೀಲಾಕ್ಷಸಾಮಾನಿ ದೇರಂಬಳ ಗೌರವ ಉಪಸ್ಥಿತರಿದ್ದರು.
ಸಭೆಯಲ್ಲಿ ಕ್ಷೇತ್ರ ತಂತ್ರಿವರ್ಯ ಬ್ರಹ್ಮ ಶ್ರೀ ಗೋವಿಂದ ಭಟ್ ಪೊಳ್ಳಕಜೆ, ಪುರೋಹಿತರಾದ ವೇದಮೂರ್ತಿ ರಾಮ ಭಟ್ ಬೋಳಂತಕೋಡಿ, ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ ಅವರನ್ನು ಗಣ್ಯರ ಸಮಕ್ಷಮ ಸನ್ಮಾನಿಸಿ ಗೌರವಿಸಲಾಯಿತು.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿ, ರಾಜಾರಾಮ ರಾವ್ ಚಿಗುರುಪಾದೆ ನಿರೂಪಿಸಿ ಸದಾಶಿವರಾವ್ ಟಿ.ಡಿ. ವಂದಿಸಿದರು.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಮಂಗಳೂರಿನ ಮಂಗಳಾ ಮ್ಯಾಜಿಕ್ ವಲ್ರ್ಡ್ ತಂಡದ ರಾಜೇಶ್ ಮಳಿ ಮತ್ತು ಬಳಗದವರಿಂದ ಮ್ಯಾಜಿಕ್ ಶೋ ಪ್ರದರ್ಶಿಸಲ್ಪಟ್ಟಿತ್ತು.