ಕಾಸರಗೋಡು: ರಾಜ್ಯದಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ಹಿಂಸಾಕೃತ್ಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಸಮರ್ಪಕವಾದ ರೀತಿಯಲ್ಲಿ ತಡೆಗಟ್ಟಲು ಕೇಂದ್ರದ ಕಾನೂನಿನಲ್ಲಿ ತಿದ್ದುಪಡಿ ತರಲು ಕೇರಳ ಸರಕಾರವು ಪ್ರಯತ್ನ ನಡೆಸಲಿದೆ ಎಂದು ಆರೋಗ್ಯ ಮತ್ತು ಸಮಾಜ ಕಲ್ಯಾಣ ಖಾತೆ ಸಚಿವೆ ಕೆ.ಕೆ.ಶೈಲಜಾ ಟೀಚರ್ ಹೇಳಿದ್ದಾರೆ.
ಮಕ್ಕಳ ಮೇಲೆ ದೌರ್ಜನ್ಯ ನಡೆಸುವವರ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕುವ ಕ್ರಮಗಳ ಬಗ್ಗೆಯೂ ಆಲೋಚಿಸಲಾಗುವುದು ಎಂದರು. ಏಳರ ಹರೆಯದ ಬಾಲಕನ ತಲೆಯನ್ನು ಆತನ ತಾಯಿಯ ಪ್ರಿಯತಮನು ನೆಲಕ್ಕೆ ಬಡಿದು ಬರ್ಬರವಾಗಿ ಕೊಲೆಗೈದ ಕರುಣಾಜನಕ ಕೃತ್ಯವು ಕೇರಳದ ಜನತೆಯ ಮನಸ್ಸಿನಿಂದ ಮಾಸುವ ಮೊದಲೇ ಆಲ್ವಾದಲ್ಲಿ ಸ್ವಂತ ತಾಯಿಯೇ ಆಕೆಯ ಮೂರು ವರ್ಷ ಪ್ರಾಯದ ಪುತ್ರನನ್ನು ತಲೆಗೆ ಹೊಡೆದು ಬರ್ಬರವಾಗಿ ಕೊಲೆಗೈದ ಘಟನೆ ನಡೆದಿದೆ.
ಈ ಇಬ್ಬರು ಮಕ್ಕಳನ್ನು ಅವರ ಸಂಬಂ„ಕರೇ ಕೊಲೆಗೈದಿದ್ದಾರೆ ಎಂಬುದು ಅತ್ಯಂತ ಆತಂಕಕಾರಿ ಹಾಗೂ ಕಳವಳಕಾರಿ ವಿಷಯವಾಗಿದೆ. ಮಕ್ಕಳ ಮೇಲೆ ಈ ರೀತಿ ನಡೆಯುತ್ತಿರುವ ಕ್ರೂರತೆ ವಿರುದ್ಧ ಜನರು ಸಿಡಿದೇಳಬೇಕಾದ ಸಮಯ ಬಂದೊದಗಿದೆ ಎಂದು ಸಚಿವೆ ಅಭಿಪ್ರಾಯಪಟ್ಟರು.
ಮಕ್ಕಳ ಮೇಲೆ ಯಾವುದೇ ರೀತಿಯ ಹಿಂಸಾಕೃತ್ಯಗಳು ನಡೆಯುವುದು ಗಮನಕ್ಕೆ ಬಂದಲ್ಲಿ ಅದನ್ನು ಜನರು ರಾಜ್ಯ ಸರಕಾರದ ತಣಲ್ (ನೆರಳು) ಯೋಜನೆಯ 1517 ಎಂಬ ಫೆÇೀನ್ ನಂಬ್ರದ ಮೂಲಕ ತಿಳಿಸಬಹುದು. ಈ ಯೋಜನೆಯು ಜಾರಿಗೊಂಡ ಬಳಿಕ ಕಳೆದ ಎರಡು ವರ್ಷಗಳಲ್ಲಿ ಈ ನಂಬ್ರದ ಮೂಲಕ 24,000 ಕರೆಗಳು ಬಂದಿವೆ. ಆ ಪೈಕಿ ಶೇ.40ರಷ್ಟು ಕರೆಗಳ ಬಗ್ಗೆ ತನಿಖೆ ನಡೆಸಲಾಗಿದೆ ಎಂದು ಸಚಿವೆ ವಿವರಿಸಿದರು.
ತಣಲ್ ಯೋಜನೆಯ ಪ್ರಯೋಜನವನ್ನು ಎಲ್ಲ ಮಕ್ಕಳಿಗೂ ಲಭಿಸುವುದಂತೆ ಮಾಡಲಾಗುವುದು. ಇದು ಮಕ್ಕಳಿಗೊಂದು ಅತ್ಯಂತ ನೆಮ್ಮದಿ ನೀಡುವ ಯೋಜನೆಯೂ ಆಗಿದೆ ಎಂದು ಕೆ.ಕೆ.ಶೈಲಜಾ ಟೀಚರ್ ತಿರುವನಂತಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ತಿಳಿಸಿದರು.