ದುಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ಆಟಗಾರ್ತಿ ಜಿಎಸ್ ಲಕ್ಷ್ಮಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ)ಯ ಮೊದಲ ಮಹಿಳಾ ಪಂದ್ಯದ ರೆಫರಿಯಾಗಿ ನೇಮಕಗೊಂಡಿದ್ದಾರೆ.
ಜಿಎಸ್ ಲಕ್ಷ್ಮಿ ಅವರು 2008-09ನೇ ಸಾಲಿನಲ್ಲಿ ಮೊದಲ ಬಾರಿ ದೇಶೀಯ ಮಹಿಳಾ ಕ್ರಿಕೆಟ್‍ನಲ್ಲಿ ಅಧಿಕೃತವಾಗಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಮೂರು ಮಹಿಳಾ ಏಕದಿನ ಹಾಗೂ ಟಿ-20 ಪಂದ್ಯಗಳಲ್ಲಿ ಮೇಲ್ವಿಚಾರಣೆ ಮಾಡಿದ್ದಾರೆ.
"ಐಸಿಸಿ ಪ್ಯಾನಲ್‍ಗೆ ಆಯ್ಕೆಯಾಗಿರುವುದು ತುಂಬಾ ಸಂತಸ ತಂದಿದ್ದು, ಇದರಿಂದ ತನಗೆ ಹೆಚ್ಚು ಗೌರವ ಸಿಕ್ಕಂತಾಗಿದೆ. ಭಾರತ ಮಹಿಳಾ ತಂಡದಲ್ಲಿ ಆಟಗಾರ್ತಿಯಾಗಿ ಹಾಗೂ ಪಂದ್ಯದ ರೆಫರಿಯಾಗಿ ಸುದೀರ್ಘ ಅವಧಿಯನ್ನು ಕ್ರಿಕೆಟ್‍ನಲ್ಲಿ ಸವೆಸಿದ್ದೇನೆ. ಒಬ್ಬ ಆಟಗಾರ್ತಿಯಾಗಿ ಹಾಗೂ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಅನುಭವವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದುಯೋಗಪಡಿಸಿಕೊಳ್ಳಲಿದ್ದೇನೆ" ಎಂದು ಲಕ್ಷ್ಮಿ ತಿಳಿಸಿದ್ದಾರೆ.
"ಈ ಅತ್ಯಮೂಲ್ಯ ಅವಕಾಶ ಒದಗಿಸಿದ ಐಸಿಸಿಗೆ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ. ಜತೆಗೆ, ಕಳೆದ ಹಲವು ವರ್ಷಗಳಿಂದ ತನ್ನ ವೃತ್ತಿ ಜೀವನದಲ್ಲಿ ಸಹಕರಿಸಿದ ಬಿಸಿಸಿಐನ ಹಿರಿಯ ಅಧಿಕಾರಿಗಳು, ನನ್ನ ಕುಟುಂಬ, ಸಹೋದ್ಯೋಗಿಗಳಿಗೆ ಚಿರಋಣಿಯಾಗಿರುತ್ತೇನೆ. ತನ್ನ ಸಾಮಥ್ರ್ಯಕ್ಕೆ ತಕ್ಕಂತೆ ಉತ್ತಮ ಸೇವೆ ನೀಡುತ್ತೇನೆಂಬ ವಿಶ್ವಾಸ ತನ್ನಲಿದೆ" ಎಂದರು.
ಭಾರತದ ಲಕ್ಷ್ಮಿ ಅವರ ಜೊತೆಗೆ ಮತ್ತೊಂದು ಮಹತ್ವದ ನೇಮಕವಾಗಿದ್ದು, ಕೆಲವು ದಿನಗಳ ಹಿಂದೆ ಐಸಿಸಿ ಪ್ಯಾನಲ್ ಮಹಿಳಾ ಅಂಪೈರ್ ಆಗಿ ನೇಮಕವಾಗಿದ್ದ ಪೊಲೊಸಾಕ್ ಅವರೊಂದಿಗೆ ಇದೀಗ ಆಸ್ಟ್ರೇಲಿಯಾದ ಎಲೊಯ್ಸ್ ಶೆರಿಡನ್ ಅವರು ಹೊಸದಾಗಿ ನೇಮಕಗೊಂಡಿದ್ದಾರೆ.
2018-19ನೇ ಋತುವಿನಲ್ಲಿ ಮಹಿಳಾ ಬಿಗ್ ಬ್ಯಾಷ್ ಲೀಗ್ ನಾಲ್ಕು ಪಂದ್ಯಗಳಲ್ಲಿ ತೀರ್ಪುಗಾರರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೇ, ಇದೇ ಆವೃತ್ತಿಯಲ್ಲಿ ಪುರುಷರ ಬಿಗ್ ಬ್ಯಾಷ್ ಲೀಗ್‍ನ ಎರಡು ಪಂದ್ಯಗಳಲ್ಲಿ ಮೀಸಲು ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು. 2018ರ ಅಕ್ಟೋಬರ್‍ನಲ್ಲಿ ಪುರುಷರ ಪ್ರಥಮ ದರ್ಜೆ ಪ್ರೀಮಿಯರ್ ಕ್ರಿಕೆಟ್ ಫೈನಲ್‍ನಲ್ಲಿ ಅಂಪೈರ್ ಆಗಿ ಸೇವೆಸಲ್ಲಿಸಿದ್ದರು. ಆ ಮೂಲಕ ಅವರು ಪುರುಷರ ಪಂದ್ಯಕ್ಕೆ ಅಂಪೈರ್ ಆಗಿ ಸೇವೆ ಸಲ್ಲಿಸಿದ್ದ ಮೊದಲ ಮಹಿಲೆ ಎಂಬ ಹೆಗ್ಗಳಿಕೆಗೆ ಅವರು ಭಾಜನರಾಗಿದ್ದರು.