ಬದಿಯಡ್ಕ: ಮಳೆಗಾಲಕ್ಕೆ ಮುನ್ನ ಶುಚೀಕರಣ ಮತ್ತು ಸಾಂಕ್ರಾಮಿಕ ರೋಗ ನಿವಾರಣೆಯ ಕುರಿತು ಕಾಳಜಿ ವಹಿಸುವ ನಿಟ್ಟಿನಲ್ಲಿ ಬದಿಯಡ್ಕ ಗ್ರಾಮಪಂಚಾಯತ್‍ನ ವಿವಿಧೆಡೆಯಲ್ಲಿ ಶುಚೀಕರಣ ನಡೆಸಲಾಯಿತು. ಗ್ರಾಮಪಂಚಾಯತ್ ಮಟ್ಟದಲ್ಲಿ ನಡೆದ ಕಾರ್ಯಕ್ರಮವನ್ನು ಗ್ರಾಮಪಂಚಾಯತ್ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಬದಿಯಡ್ಕ ಬಸ್ ನಿಲ್ದಾಣದ ಪರಿಸರದಲ್ಲಿ ಉದ್ಘಾಟಿಸಿ ಮಾತನಾಡಿ, ರೋಗ ಬಾರದಂತೆ ತಡೆಯುವ ನಿಟ್ಟಿನಲ್ಲಿ ಹಮ್ಮಿಕೊಂಡ ಈ ಶುಚೀಕರಣ ಕಾರ್ಯಕ್ರಮವು ನಾಡಿನಾದ್ಯಂತ ಯಶಸ್ವಿಯಾಗಬೇಕಾದರೆ ಪ್ರತಿಯೊಬ್ಬರೂ ಕಾಳಜಿಯನ್ನು ವಹಿಸಬೇಕಾಗಿದೆ. ತಮ್ಮ ಪರಿಸರವನ್ನು ಶುಚಿಯಾಗಿರಿಸುವ ಮೂಲಕ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬೇಕಾಗಿದೆ. ಮಳೆಯ ಆರಂಭಕ್ಕೂ ಮೊದಲೇ ಈ ನಿಟ್ಟಿನಲ್ಲಿ ನಡೆದ ಕಾರ್ಯಕ್ರಮವು ಜನತೆಯಲ್ಲಿ ಜಾಗೃತಿಯನ್ನು ಮೂಡಿಸಲು ಕಾರಣವಾಗಲಿ ಎಂದು ಹೇಳಿದರು. ಗ್ರಾಮಪಂಚಾಯತ್ ಉಪಾಧ್ಯಕ್ಷೆ ಸೈಬುನ್ನೀಸ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಅನ್ವರ್ ಓಸೋನ್ ಹಾಗೂ ಶ್ಯಾಮಪ್ರಸಾದ ಮಾನ್ಯ, ಗ್ರಾಮಪಂಚಾಯತಿ ಸದಸ್ಯರುಗಳಾದ ಬಾಲಕೃಷ್ಣ ಶೆಟ್ಟಿ ಕಡಾರು, ವಿಶ್ವನಾಥ ಪ್ರಭು ಕರಿಂಬಿಲ, ಆರೋಗ್ಯ ಇಲಾಖೆಯ ಅಧಿಕಾರಿಗಳು, ಕುಟುಂಬಶ್ರೀ ಸದಸ್ಯೆಯರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಗ್ರಾಮ ಪಂ. ಕಾರ್ಯದರ್ಶಿ ಶೈಲೇಂದ್ರನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ದಿನನಿತ್ಯ ಬದಿಯಡ್ಕ ಬಸ್ ಪ್ರಯಾಣಿಕರ ತಂಗುದಾಣವನ್ನು ಗುಡಿಸಿ ಶುಚಿಗೊಳಿಸುತ್ತಿರುವ ಪತ್ರಿಕಾ ವಿತರಕ ಬಾಲಕೃಷ್ಣ ಅವರು ಈ ಸಂದರ್ಭದಲ್ಲಿಯೂ ಜನಪ್ರತಿನಿಧಿಗಳೊಂದಿಗೆ ಪಾಲ್ಗೊಂಡು ಶುಚೀಕರಣದಲ್ಲಿ ಸಹಕರಿಸಿದರು.