ಕುಂಬಳೆ: ಸೀತಾಂಗೋಳಿಯ ಸಂತೋಷ್ ಆರ್ಟ್ ಮತ್ತು ಸ್ಪೋರ್ಟ್ ಕ್ಲಬ್ ನೇತೃತ್ವದಲ್ಲಿ ಬುಧವಾರ ಸಂಜೆ ಸೀತಾಂಗೋಳಿಯಲ್ಲಿ ಸಾಮೂಹಿಕ ಇಪ್ತಾರ್ ಕೂಟ ಸಂಘಟಿಸಲಾಯಿತು.
ಸಮಾರಂಭದಲ್ಲಿ ಮಹಾಲಿಂಗ ಕೆ.ಅಧ್ಯಕ್ಷತೆ ವಹಿಸಿದ್ದರು. ಪುತ್ತಿಗೆ ಗ್ರಾ.ಪಂ.ಸದಸ್ಯ ಇ.ಕೆ.ಮೊಹಮ್ಮದ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಸ್ಥಳೀಯ ಹಿಂದೂ, ಮುಸ್ಲಿಂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಹದಿನಾರು ದಿನದ ಹಸುಗೂಸೊಂದನ್ನು ತುರ್ತು ಚಿಕಿತ್ಸೆಗೆ ಮಂಗಳೂರಿನಿಂದ ಎರ್ನಾಕುಳಂ ಗೆ ಐದೂವರೆ ಗಂಟೆಗಳಲ್ಲಿ ತಲಪಿಸಿದ ಆಂಬುಲೆನ್ಸ್ ಚಾಲಕ ಹಸನ್ ದೇಳಿ ಅವರ ಮಾನವೀಯ ವೃತ್ತಿ ಕ್ಷಮತೆಯನ್ನು ಮನ್ನಿಸಿ ಸನ್ಮಾನಿಸಿ ಗೌರವಿಸಲಾಯಿತು. ಪುತ್ತಿಗೆ ಗ್ರಾ.ಪಂ.ಮಾಜಿ ಸದಸ್ಯ ಜಯಂತ ಪಾಟಾಳಿ, ನಾಗರಾಜ, ತಿಮೋತಿ ಕ್ರಾಸ್ತಾ, ಅಬ್ದುಲ್ ರಹಿಮಾನ್ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು. ನ್ಯಾಯವಾದಿ ಥೋಮಸ್ ಡಿಸೋಜಾ ಸ್ವಾಗತಿಸಿ, ಕ್ಲಬ್ಬಿನ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಹಿರಿಯ ಸದಸ್ಯ ಅಪ್ಪಣ್ಣ ವಂದಿಸಿದರು.