ರಾಯ್ ಬರೇಲಿ: ದೇಶದ ಮೂಲ ಮೌಲ್ಯಗಳನ್ನು ರಕ್ಷಿಸುವುದಕ್ಕಾಗಿ ನಾನು ಯಾವುದೇ ತ್ಯಾಗಕ್ಕೂ ಸಿದ್ಧವಾಗಿದ್ದೇನೆ ಎಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಭಾನುವಾರ ಹೇಳಿದ್ದಾರೆ.
ಸೋನಿಯಾ ಗಾಂಧಿ ಅವರು ತಮ್ಮನ್ನು ಮತ್ತೆ ಸಂಸತ್ ಗೆ ಆಯ್ಕೆ ಮಾಡಿದ ರಾಯ್ ಬರೇಲಿ ಜನತೆಗೆ ಧನ್ಯವಾದ ಹೇಳಿ ಪತ್ರ ಬರೆದಿದ್ದು, ತಮ್ಮ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಳಿಸಿದ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಕ್ಕೂ ಧನ್ಯವಾದ ಹೇಳಿದ್ದಾರೆ.
ದೇಶದ ಮೌಲ್ಯಗಳನ್ನು ಕಾಪಾಡಿಕೊಳ್ಳಲು ಮತ್ತು ಕಾಂಗ್ರೆಸ್ ನ ಪೂರ್ವಜರ ಸಂಪ್ರದಾಯವನ್ನು ಎತ್ತಿಹಿಡಿಯಲು ನಾನು ಇದುವರೆಗೂ ಪಡೆದ ಎಲ್ಲವನ್ನೂ ತ್ಯಾಗ ಮಾಡಲು ಸ್ಧಿದವಾಗಿದ್ದೇನೆ ಎಂದು ಸೋನಿಯಾ ಹೇಳಿದ್ದಾರೆ.
ಮುಂದಿನ ದಿನಗಳು ತುಂಬಾ ಕಠಿಣವಾಗಿರಲಿವೆ ಎಂದು ನನಗೆ ಗೊತ್ತು. ಆದರೆ ನಿಮ್ಮ ಬೆಂಬಲ ಮತ್ತು ವಿಶ್ವಾಸದಿಂದ ಕಾಂಗ್ರೆಸ್ ಪ್ರತಿ ಸವಾಲುಗಳನ್ನು ಎದುರಿಸಲಿದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.
ಪ್ರತಿ ಲೋಕಸಭೆ ಚುನಾವಣೆಯಂತೆ ಈ ಬಾರಿಯೂ ನನ್ನ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿದ್ದಕ್ಕೆ ರಾಯ್ ಬರೇಲಿಯ ಪ್ರತಿ ಮತದಾರ, ಕಾಂಗ್ರೆಸ್ ಕಾರ್ಯಕರ್ತನಿಗೆ ಮತ್ತು ಎಸ್ ಪಿ, ಬಿಎಸ್ ಪಿ ನನ್ನ ಅಭಿನಂದನೆಗಳು ಎಂದು ಸೋನಿಯಾ ಪತ್ರದಲ್ಲಿ ತಿಳಿಸಿದ್ದಾರೆ.