ಪೆರ್ಲ: ನಾಡಿನಲ್ಲಿ ಎಲ್ಲೆಲ್ಲೂ ಬರದ ಛಾಯೆ ಆವರಿಸಿದೆ. ವರ್ಷಪೂರ್ತಿ ನೀರಿನ ಹರಿವಿನೊಂದಿಗೆ ಜೀವಸೆಳೆಯಾಗಿದ್ದ ತೋಡು, ತೊರೆಗಳೂ ಈ ಬಾರಿಯ ಬರಗಾಲಕ್ಕೆ ಬತ್ತಿ ಬರಡಾಗಿದೆ. ಮಂಜೇಶ್ವರ ತಾಲೂಕಿನ ಎಣ್ಮಕಜೆ ಪಂಚಾಯಿತಿ ಪಡ್ರೆಯ ಸ್ವರ್ಗ ತೋಡು ಇದಕ್ಕೆ ಜ್ವಲಂತ ಸಾಕ್ಷಿಯಾಗಿದೆ.
ಮೇ ತಿಂಗಳ ವರೆಗೂ ತನ್ನ ಒಡಲಲ್ಲಿ ನೀರುಹಿಡಿದಿಟ್ಟುಕೊಳ್ಳುವ ಮೂಲಕ ಇಡೀ ಪಂಚಾಯಿತಿಗೆ ಮಾದರಿಯಾಗಿದ್ದ, ಸ್ವರ್ಗ ತೋಡು ಬರಡಾಗಿರುವುದು ದುರಂತದ ಸಂಕೇತವೆಂದೇ ನಾಡಿನ ಜನತೆ ವ್ಯಾಖ್ಯಾನಿಸುತ್ತಿದ್ದಾರೆ. ಭೌಗೋಳಿಕವಾಗಿ ಎರಡೂ ಬದಿಯಿಂದ ಗುಡ್ಡಬೆಟ್ಟವನ್ನು ಹೊಂದಿರುವ ಈ ಪ್ರದೇಶದಲ್ಲಿನ ತೋಡು ಬತ್ತಿಬರಡಾದ ನಿದರ್ಶನ ಕಡಿಮೆ. 1983ರಲ್ಲಿ ಬಾ„ಸಿದ ಬರಗಾಲದಲ್ಲಿ ತೋಡು ಬರಿದಾಗಿರುವುದು ಬಿಟ್ಟರೆ, ಇದೇ ವರ್ಷ ಇಷ್ಟೊಂದು ಪ್ರಮಾಣದಲ್ಲಿ ಬರಡಾಗಿದೆ ಎಂಬುದು ನಾಡಿನ ಜನತೆಯ ಅಭಿಪ್ರಾಯ. ಎಣ್ಮಕಜೆ ಪಂಚಾಯಿತಿಯ ಪಡ್ರೆ ಮತ್ತು ಬಜಕೂಡ್ಲು ಬಯಲಲ್ಲಿ ನೀರು ಕಡಿಮೆಯಾದ ನಿದರ್ಶನ ತೀರಾ ಕಡಿಮೆ ಎಂಬುದಾಗಿ ಇತ್ತೀಚಿನ ವರ್ಷಗಳಲ್ಲಿ ಇಲ್ಲಿನ ಹಿರಿಯರು ನೆನಪಿಸುತ್ತಾರೆ.
ತೋಡಿಗಿಳಿದ ಜನತೆ:
ಸ್ವರ್ಗದ ಒಂದಷ್ಟು ಆಸಕ್ತ ಜನರ ತಂಡ, ತೋಡು ಬರಿದಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸದಾ ನೀರಿನ ಹರಿವಿನೊಂದಿಗೆ ಸಜೀವವಾಗಿರುತ್ತಿದ್ದ ಸ್ವರ್ಗತೋಡನ್ನು ಉದಾಹರಣೆಯಾಗಿ ಕೊಂಡಾಡುತ್ತಿದ್ದ ಊರಿನ ಜನತೆ, ಪ್ರಸಕ್ತ ತೋಡು ಬರಿದಾಗಿರುವ ಬಗ್ಗೆ ಆತಂಕಕ್ಕೀಡಾಗಿದ್ದಾರೆ. ಆತಂಕವನ್ನು ತಮ್ಮಲ್ಲೇ ಹುದುಗಿಕೊಳ್ಳದೆ, ಇದಕ್ಕೆ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದಾರೆ. ಇದಕ್ಕಾಗಿ ಬರಿದಾದ ತೋಡಿಗಿಳಿದು ಜನರಲ್ಲಿ ಜÁಗೃತಿ ಮೂಡಿಸಲು ಮುಂದಾಗಿದ್ದಾರೆ. ವ್ಯಾಪಕ ಕೊಳವೆಬಾವಿಗಳ ನಿರ್ಮಾಣ, ಹೆಚ್ಚುತ್ತಿರುವ ಕೃಷಿಪ್ರದೇಶ, ಅಂತರ್ಜಲ ಹೆಚ್ಚಳಕ್ಕೆ ಯಾವುದೇ ಕ್ರಮ ಕೈಗೊಳ್ಳದಿರುವಿಕೆ ತೋಡು ಬರಿದಾಗಲು ಕಾರಣ ಎಂಬುದನ್ನು ಈ ತಂಡ ಸುಲಭವಾಗಿ ಮನಗಂಡು, ಇದರ ಪರಿಹಾರಕ್ಕೆ ಮುಂದೇನು ಕ್ರಮಕೈಗೊಳ್ಳಬಹುದು ಎಂಬ ಬಗ್ಗೆ ಚಿಂತನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತೋಡಿನ ದಡದಲ್ಲಿರುವ ಜನರನ್ನು ಒಟ್ಟುಸೇರಿಸಿ ತೋಡನ್ನು ಯಾವರೀತಿ ಪುನರುಜ್ಜೀವನಗೊಳಿಸಬಹುದು, ಈ ಮೂಲಕ ತಮ್ಮ ಬಾವಿ ಸಹಿತ ಜಲಾಶಯಗಳಲ್ಲಿ ನೀರಿನಮಟ್ಟ ವೃದ್ಧಿಸಿಕೊಳ್ಳುವ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಇದನ್ನು ಕಾರ್ಯರೂಪಕ್ಕಿಳಿಸುವುದಕ್ಕಾಗಿ ಪ್ರಯತ್ನ ನಡೆಸಿದ್ದಾರೆ. ಬ್ಲಾಕ್ ಪಂಚಾಯಿತಿ ಸದಸ್ಯೆ ಸವಿತಾ ಬಾಳಿಕೆ, ನಾಗರಾಜಭಟ್, ಚಂದ್ರಶೇಖರ್, ವಿವೇಕ್, ಕೆ.ವೈ ಸುಬ್ರಹ್ಮಣ್ಯ ಭಟ್ ಸಹಿತ ಅನೇಕಮಂದಿ ಉತ್ಸಾಹಿಗಳು ಈ ಕಾರ್ಯದಲ್ಲಿ ಕೈಜೋಡಿಸುತ್ತಿದ್ದಾರೆ.
ಕಟ್ಟಗಳೇ ಜೀವಾಳ:
ತೋಡುಗಳಿಗೆ ಅಲ್ಲಲ್ಲಿ ಕಟ್ಟ ಕಟ್ಟಿ ನೀರು ನಿಲ್ಲಿಸುವ ಮೂಲಕ ಅಂತರ್ಜಲಮಟ್ಟ ಕಾಯ್ದುಕೊಳ್ಳುವ ಪ್ರಯತ್ನವನ್ನು ಸ್ವರ್ಗದ ಜನತೆ ಮುಂದುವರಿಸುವ ಚಿಂತನೆ ನಡೆಸಿದ್ದಾರೆ. ಇದಕ್ಕಾಗಿ ಎಲ್ಲ ಜನರ ಸಹಕಾರವನ್ನೂ ಯಾಚಿಸಿದ್ದಾರೆ. ಅಲ್ಲಲ್ಲಿ ಎರಡರಿಂದ ನಾಲ್ಕು ಅಡಿ ಎತ್ತರಕ್ಕೆ ಕಟ್ಟಗಳನ್ನು ಕಟ್ಟಿ ನೀರು ಹಿಡಿದಿಟ್ಟುಕೊಳ್ಳುವ ಮೂಲಕ ಜೀವನದಿ ಸ್ವರ್ಗದ ತೋಡನ್ನು ಪುನರುಜ್ಜೀವನಗೊಳಿಸಲು ಪ್ರಯತ್ನ ಮುಂದುವರಿದಿದೆ. ಪಡ್ರೆಯ ಕಿಞಣ್ಣಮೂಲೆಯಿಂದ ಉಗಮಿಸುವ ಸ್ವರ್ಗತೋಡಿಗೆ ಅಲ್ಲಲ್ಲಿ ಕಟ್ಟ ಕಟ್ಟಿ ತೋಡನ್ನು ಈ ಹಿಂದಿನಂತೆ ವರ್ಷಪೂರ್ತಿ ಹರಿಸುವಂತೆ ಮಾಡುವುದು ಇಲ್ಲಿನ ಉತ್ಸಾಹಿ ಜನರ ಆಗ್ರಹವಾಗಿದೆ. ಸರ್ಕಾರದ ಸಬ್ಸಿಡಿಗಾಗಿ ಅಲೆದಾಡದೆ, ಸ್ವಂತ ಪರಿಶ್ರಮದಿಂದ ಈ ಕಾರ್ಯ ನಡೆಸಲು ಊರಿನ ಜನತೆ ಪಣತೊಟ್ಟಿದ್ದಾರೆ. ಸ್ವರ್ಗದ ಜನತೆಯ ಈ ಪರಿಶ್ರಮ ಯಶಸ್ವಿಯಾದಲ್ಲಿ ನಾಡಿಗೆ ಇದು ಮಾದರಿಯಾಗಲಿದೆ.
ಪಂಚಾಯಿತಿ ವ್ಯಾಪ್ತಿಯ ಜನತೆ ನೀರಿಗಾಗಿ ಪರದಾಡುತ್ತಿದ್ದು, ಇವರಿಗೆ ವಾಹನಗಳ ಮೂಲಕ ನೀರು ಪೂರೈಸಲಾಗುತ್ತಿದೆ. ದೂರದ ನಗರ ಪ್ರದೇಶದಲ್ಲಿ ಕಂಡುಬರುತ್ತಿದ್ದ ನೀರಿನ ಸಮಸ್ಯೆ, ಜಲಸಮೃದ್ಧಿಯಿಂದ ಕೂಡಿದ ಗ್ರಾಮೀಣ ಪ್ರದೇಶದ ಜನತೆಯನ್ನು ಇಂದು ಕಾಡಲಾರಂಭಿಸಿರುವುದು ಆತಂಕಕ್ಕೆ ಕಾರಣವಾಗಿದೆ. ನೀರು ಪೂರೈಕೆಗೆ ಲಕ್ಷಾಂತರ ರೂ. ವೆಚ್ಚಮಾಡುವ ಸರ್ಕಾರ, ಅಲ್ಲಲ್ಲಿ ಇಂಗುಬಾವಿಗಳ ನಿರ್ಮಾನ ಮಾಡಿದಲ್ಲಿ ಅಂತರ್ಜಲಮಟ್ಟ ಸುಲಭವಾಗಿ ಹೆಚ್ಚಿಸಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.