ನವದೆಹಲಿ: ನಮಗೆ ಯಾವತ್ತೂ ಅಹಂಕಾರ ಬರಬಾರದು. ಅಹಂಕಾರವನ್ನು ಎಷ್ಟು ದೂರ ತಳ್ಳುತ್ತೇವೆಯೇ ಅಷ್ಟು ನಮಗೆ ಒಳ್ಳೆಯದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ನೂತನ ಸಂಸದರಿಗೆ ಪಾಠ ಮಾಡಿದ್ದಾರೆ.
ನಿನ್ನೆ ಸಂಸತ್ ನ ಸೆಂಟ್ರಲ್ ಹಾಲ್ ನಲ್ಲಿ ಬಿಜೆಪಿ ಸಂಸದೀಯ ನಾಯಕರಾಗಿ ಆಯ್ಕೆಯಾದ ನಂತರ ಪಕ್ಷದ ನೂತನ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಎನ್‍ಡಿಎಗೆ 353 ಸ್ಥಾನ ಕೊಟ್ಟಿರುವ ಜನ ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಎಂದರು.
ಎನ್‍ಡಿಎಗೆ ಈ ಪರಿಯ ಜನ ಬೆಂಬಲ ದೊರೆತಿರುವುದಕ್ಕೆ ನಾವು ಖುಷಿ ಪಡುವುದಕ್ಕಿಂತ ಇನ್ನಷ್ಟು ಎಚ್ಚೆತ್ತುಕೊಳ್ಳಬೇಕು. ಏಕೆಂದರೆ ಪ್ರತಿ ಬಾರಿಯೂ ನಮ್ಮ ಯಶಸ್ಸು ನಮ್ಮ ಮೇಲಿನ ಜವಾಬ್ದಾರಿಯ ಹೊರೆಯನ್ನು ಹೆಚ್ಚಿಸುತ್ತದೆ. ಈ ವಿಶ್ವಾಸವನ್ನು ನಾವು ಉಳಿಸಿಕೊಳ್ಳಲು ಪ್ರಯತ್ನಿಸಬೇಕು. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಮೋದಿ ಹೇಳಿದರು.
ಈ ಜನಾದೇಶ ನಮ್ಮ ಜವಾಬ್ದಾರಿಗಳನ್ನು ಮತ್ತಷ್ಟು ಹೆಚ್ಚಿಸಿದೆ. ಈ ಜವಾಬ್ದಾರಿಯನ್ನು ಎಲ್ಲರೂ ಸಮರ್ಥವಾಗಿ ನಿಭಾಯಿಸಬೇಕು. ದೇಶದ ರಾಜಕೀಯದಲ್ಲಿ ಬದಲಾವಣೆ ಬಂದಿದೆ. ಅಧಿಕಾರ ಮತದಾರರ ಮೇಲೆ ಎಂದೂ ಪ್ರಭಾವಿಸಲ್ಲ. ಜನ ನಮ್ಮನ್ನು ಆರಿಸಿದ್ದು ನಮ್ಮ ಸೇವಾಭಾವ ನೋಡಿ ಎಂದರು.
ನನ್ನ ಆಯ್ಕೆ ಪ್ರಜಾತಂತ್ರ ವ್ಯವಸ್ಥೆಯ ಒಂದು ಭಾಗ. ನಾನು ಕೂಡ ನಿಮ್ಮಂತೆಯೇ ಓರ್ವ ಸಂಸದ. ಮತದಾರರ ಪ್ರಬುದ್ಧತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೊಸ ನಾಯಕತ್ವವನ್ನು ದೇಶದ ಜನ ಗುರುತಿಸಿದ್ದಾರೆ. ದೇಶದ ಜನ ಸಕಾರಾತ್ಮಕವಾಗಿ ಮತದಾನ ಮಾಡಿದ್ದಾರೆ. ದೇಶದಲ್ಲಿ ಉತ್ತಮ ಕೆಲಸಗಳಾಗಬೇಕೆಂದು ಜನ ಬೆಂಬಲ ಸಿಕ್ಕಿದೆ. ದೇಶದ ಅಭಿವೃದ್ಧಿ ಕನಸಿಗೆ 130 ಕೋಟಿ ಜನರಿಂದ ಸಾಥ್ ನೀಡಿದ್ಧಾರೆ ಎಂದರು.
ಇದಕ್ಕೂ ಮೊದಲು ಸಂಸತ್ ಭವನದ ಸೆಂಟ್ರಲ್ ಹಾಲ್‍ನಲ್ಲಿ ಸಂವಿಧಾನದ ಫಲಕಕ್ಕೆ ಶಿರಬಾಗಿ ನಮಿಸಿದರು.