ಇಸ್ಲಾಮಾಬಾದ್: ಭಾರತ ಇನ್ನು ನಮಗೆ ಮತ್ತಷ್ಟು ಕಠಿಣ ದೇಶವಾಗಲಿದೆ ಎಂದು ಪಾಕಿಸ್ತಾನದ ಮಾಜಿ ಸಚಿವರೊಬ್ಬರು ಮಾಡಿರುವ ಟ್ವೀಟ್ ವೈರಲ್ ಆಗುತ್ತಿದೆ.
ಲೋಕಸಭಾ ಚುನಾವಣೆಯಲ್ಲಿನ ಮೋದಿ ಮತ್ತು ಬಿಜೆಪಿ ಗೆಲುವು ಕೇವಲ ದೇಶದಲ್ಲಿ ಮಾತ್ರವಲ್ಲ.. ಬದಲಿಗೆ ನೆರೆಯ ಪಾಕಿಸ್ತಾನದಲ್ಲೂ ಬಾರಿ ಸುದ್ದಿಗೆ ಗ್ರಾಸವಾಗುತ್ತಿದ್ದು, ಪಾಕಿಸ್ತಾನದಲ್ಲಿ ಭಾರತದ ಚುನಾವಣಾ ಫಲಿತಾಂಶವನ್ನು ನೇರ ಪ್ರಸಾರದಲ್ಲಿ ವೀಕ್ಷಣೆ ಮಾಡಲಾಗುತ್ತಿದೆ. ಆ ಮೂಲಕ ಪಾಕಿಸ್ತಾನದಲ್ಲೂ ಭಾರತದ ಲೋಕಸಭಾ ಚುನಾವಣೆ ಪ್ರಾಮುಖ್ಯತೆ ಪಡೆದಿದೆ.
ಇದಕ್ಕೆ ಇಂಬು ನೀಡುವಂತೆ ಪಾಕಿಸ್ತಾನದ ಮಾಜಿ ಮಾಹಿತಿ ಸಚಿವೆ ಹಾಗೂ ಪಾಕಿಸ್ತಾನ ಪೀಪಲ್ ಪಕ್ಷದ ನಾಯಕಿ ಶೆರ್ರಿ ರೆಹಮಾನ್ ಈ ಕುರಿತಂತೆ ಟ್ವೀಟ್ ಮಾಡಿದ್ದು, ಭಾರತದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮತ್ತು ಎನ್ ಡಿಎ ಮೈತ್ರಿಕೂಟ ಭರ್ಜರಿ ಗೆಲುವಿನತ್ತ ದಾಪುಗಾಲಿರಿಸಿದೆ. ಎಕ್ಸಿಟ್ ಪೋಲ್ ನಂತೆಯೇ ಫಲಿತಾಂಶ ಬಂದರೆ, ಭಾರತ ಇನ್ನು ಮುಂದೆ ಮತ್ತಷ್ಟು ಕಠಿಣ ನೆರೆಯ ದೇಶವಾಗಲಿದೆ ಎಂಬ ಆತಂಕ ಅವರು ವ್ಯಕ್ತಪಡಿಸಿದ್ದಾರೆ. ಅಂತೆಯೇ ತಮ್ಮ ಐಎಸ್ ಸಂಸ್ಥೆಯ ಸಾಮಥ್ರ್ಯದ ಕುರಿತು ಮಾತನಾಡಿರುವ ಅವರು ಮೋದಿ ಮಿಠಾಯಿಗೆ ಐಎನ್ ಎಸ್ ಹಲ್ಲು ಮಜುಭೂತಾಗಿದೆ ಎಂದು ವ್ಯಂಗ್ಯ ಮಾಡಿದ್ದಾರೆ.
ಪಾಕಿಸ್ತಾನದ ರಾಯಭಾರ ಕಚೇರಿಯಲ್ಲಿ ಲೋಕಸಭಾ ಚುನಾವಣೆಯ ನೇರ ಪ್ರಸಾರ
ಈ ಮಧ್ಯೆ ಭಾರತದ ಲೋಕಸಭಾ ಚುನಾವಣೆ ಪಾಕಿಸ್ತಾನದಲ್ಲೂ ಭಾರಿ ಸದ್ದು ಮಾಡಿದೆ. ಪಾಕಿಸ್ತಾನದಲ್ಲಿ ಚುನಾವಣಾ ಫಲಿತಾಂಶವನ್ನೂ ಕೂಡ ನೇರ ಪ್ರಸಾರ ಮಾಡಲಾಯಿತು. ಪಾಕಿಸ್ತಾನ ಪ್ರಮುಖ ಸುದ್ಧಿ ಸಂಸ್ಥೆ ಡಾನ್ ಸೇರಿದಂತೆ ಹಲವು ಖ್ಯಾತನಾಮ ಪತ್ರಿಕೆಗಳು ಲೋಕಸಭಾ ಚುನಾವಣೆಯ ಫಲಿತಾಂಶದ ತತ್ ಕ್ಷಣದ ವರದಿ ಮಾಡಿತು. ಡಾನ್ ಸುದ್ದಿಸಂಸ್ಥೆ ಭಾರತದ ಲೋಕಸಭಾ ಚುನಾವಣೆಗಾಗಿಯೇ ಪ್ರತ್ಯೇಕ ವೆಬ್ ಪುಟವನ್ನು ತೆರೆದಿದ್ದು, ಡಾನ್ ಮಾತ್ರವಲ್ಲದೇ ಪಾಕಿಸ್ತಾನದ ಬಹುತೇಕ ಸುದ್ದಿ ಮಾಧ್ಯಮಗಳು ಚುನಾವಣಾ ಫಲಿತಾಂಶದ ಲೈವ್ ಕವರೇಜ್ ನೀಡಿತ್ತು.