ಪೆರ್ಲ:ಜಗತ್ತಿನಲ್ಲೇ ಸರ್ವ ಶ್ರೇಷ್ಠವಾದ ಭಾರತೀಯ ಸನಾತನ ಸಂಸ್ಕೃತಿಯನ್ನು ಪ್ರತಿಯೊಬ್ಬನೂ ಜೀವನದಲ್ಲಿ ಅಳವಡಿಸಬೇಕು.ಸಂಸ್ಕೃತಿಯ ಮಹತ್ವವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಲು ಹಿರಿಯರು ಕಾಳಜಿ ವಹಿಸಬೇಕು ಎಂದು ಖ್ಯಾತ ಮನಃಶಾಸ್ತ್ರಜ್ಞ ನವೀನ್ ಎಲ್ಲಂಗಳ ತಿಳಿಸಿದರು.
ಭಾರತೀಯ ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಾಣೀನಗರ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಇತ್ತೀಚೆಗೆ ನಡೆದ 'ಭಾರತೀಯ ಸಂಸ್ಕೃತಿಯಲ್ಲಿ ವೈಜ್ಞಾನಿಕತೆ' ವಿಷಯ ಕುರಿತಾದ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ವಿದೇಶೀಯರೂ ಭಾರತೀಯ ಜೀವನಶೈಲಿಗೆ ಮಾರು ಹೋಗಿದ್ದಾರೆ.ಭಾರತೀಯ ಸಂಸ್ಕೃತಿಯನ್ನು ಅನುಸರಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ಆಧುನಿಕ ಕಾಲಘಟ್ಟದಲ್ಲಿ ಭಾರತೀಯರು ದೇಶದ ಸಂಸ್ಕೃತಿಯ ಮಹತ್ವ ತಿಳಿಯದೆ ವಿದೇಶೀ ಸಂಸ್ಕೃತಿಯನ್ನು ಅನುಕರಿಸುತ್ತಿದ್ದಾರೆ.ಭಾರತೀಯ ಸಂಸ್ಕೃತಿಯನ್ನು ವಿದೇಶದಲ್ಲಿ ಹೋಗಿ ಕಲಿಯುವ ಅನಿವಾರ್ಯತೆ ಭಾರತೀಯರಿಗೆ ಬಂದೊದಗಿದೆ.ಇದರಿಂದ ಹಿಂಜರಿದು ನಮ್ಮ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿ ಸುಸಂಸ್ಕೃತ ಜೀವನ ನಡೆಸಬೇಕು ಎಂದರು.
ಭಜನಾ ಮಂದಿರ ಗೌರವಾಧ್ಯಕ್ಷ ಪತ್ತಡ್ಕ ಗಣಪತಿ ಭಟ್ ಅವರು ನವೀನ್ ಎಲ್ಲಂಗಳ ಅವರನ್ನು ಶಾಲು ಹೊದಿಸಿ ಅಭಿನಂದಿಸಿ ಮಾತನಾಡಿ, ಹಲವಾರು ವರ್ಷಗಳಿಂದ ಪ್ರತಿಫಲಾಪೇಕ್ಷೆ ಇಲ್ಲದೆ ಭಾರತೀಯ ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುವ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಂಡು ಬರುತ್ತಿರುವ ನವೀನ್ ಎಲ್ಲಂಗಳ ಅವರನ್ನು ಶ್ಲಾಘಿಸಿದರು.
ಭಜನಾ ಮಂದಿರದ ಅಧ್ಯಕ್ಷ ಕೃಷ್ಣ ಕುತ್ತಾಜೆ ಅಧ್ಯಕ್ಷತೆ ವಹಿಸಿದ್ದರು.ಗ್ರಾ.ಪಂ. ಸದಸ್ಯೆ ಶಶಿಕಲಾ ಉಪಸ್ಥಿತರಿದ್ದರು. ಶ್ಯಾಮಲಾ ಪತ್ತಡ್ಕ ಸ್ವಾಗತಿಸಿ, ಪ್ರದೀಪ್ ಶಾಂತಿಯಡಿ ವಂದಿಸಿದರು.