ನವದೆಹಲಿ: ಲೋಕಸಭೆ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳು ಹೊರಬಿದ್ದ ಬೆನ್ನಲ್ಲೇ ದೆಹಲಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಬಿಜೆಪಿ ನೇತೃತ್ವದ ಎನ್ ಡಿಎ ಮತ್ತೊಂದು ಬಾರಿ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿರುವ ಕಾರಣ ಬಿಜೆಪಿ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದೆ. ಇನ್ನೊಂದು ದಿಕ್ಕಿನಲ್ಲಿ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದ ಪ್ರತಿಪಕ್ಷಗಳಿಗೆ ಆಘಾತವಾಗಿದ್ದು, ಆತಂಕದ ನಡುವೆಯೇ ಮುಂದಿನ ಕಾರ್ಯತಂತ್ರದ ಬಗ್ಗೆ ಲೆಕ್ಕಾಚಾರಗಳನ್ನು ಶುರು ಮಾಡಿವೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಮಾತುಕತೆ ನಡೆಸಿದ್ದು, ಒಂದು ವೇಳೆ ಆತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚಿಸಲು ನಿರ್ಧರಿಸಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಅಮರಾವತಿಯಿಂದ ಕೊಲ್ಕತ್ತಾಕ್ಕೆ ತೆರಳಿದ್ದ ಚಂದ್ರಬಾಬು ನಾಯ್ಡು ಸುಮಾರು 45 ನಿಮಿಷಗಳ ಕಾಲ ಮಮತಾ ಬ್ಯಾನರ್ಜಿ ಅವರೊಂದಿಗೆ ಮಹಾಘಟಬಂದನ್ ಸಂಬಂಧ ಮಾತುಕತೆ ನಡೆಸಿದ್ದಾರೆ .ಕಾಂಗ್ರೆಸ್ ಜೊತೆಗೆ ಪ್ರಾದೇಶಿಕ ಪಕ್ಷಗಳ ಸಹಯೋಗದಿಂದ ಬಿಜೆಪಿ ಸರ್ಕಾರ ರಚನೆಯ ಸಾಧಕ- ಬಾಧಕಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂಬುದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಮೇ 23ರ ನಂತರ ಆತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಏನು ಮಾಡಬಹುದು ಎಂಬುದರ ಬಗ್ಗೆ ಇತರ ಪಕ್ಷಗಳೊಂದಿಗೆ ಸಮಗ್ರವಾಗಿ ಇಂದು ಚರ್ಚಿಸಲಾಗುತ್ತಿದೆ. ಮೇ 23ರ ನಂತರ ಮಮತಾ ಬ್ಯಾನರ್ಜಿ ನವದೆಹಲಿಗೆ ತೆರಳಲಿದ್ದಾರೆ ಎಂಬುದು ತಿಳಿದುಬಂದಿದೆ.
ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ದೂರವಾಣಿ ಮೂಲಕ ಮಮತಾ ಬ್ಯಾನರ್ಜಿಅವರೊಂದಿಗೆ ಮಹಾಘಟಬಂಧನ್ ಬಗ್ಗೆ ಚರ್ಚಿಸಿದ್ದಾರೆ. ಚಂದ್ರಬಾಬು ನಾಯ್ಡು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಹಾಗೂ ಸಿಪಿಐ-ಎಂ- ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹಾಗೂ ಬಿಎಸ್ಪಿ ಮುಖಂಡೆ ಮಾಯಾವತಿ ಅವರೊಂದಿಗೂ ಮಾತುಕತೆ ನಡೆಸಿದ್ದಾರೆ.