ಉಪ್ಪಳ: ಯಕ್ಷಗಾನ ಎಂಬುದು ನಮಗೆ ಪೂರ್ವಿಕರು ಕಟ್ಟಿಕೊಟ್ಟ ಮಹಾಮನೆ. ಆ ಮನೆಯನ್ನು ನಿರ್ಮಿಸಿಕೊಟ್ಟವರಿಗೆ ಧ್ಯೇಯ, ಉದ್ದೇಶಗಳಿತ್ತು. ಆದರಿಂದು ನಮಗೆ ಆ ಮನೆಯ ಬಣ್ಣ, ವಿನ್ಯಾಸ ಚಂದ ಕಾಣುವುದಿಲ್ಲವೆಂದು ತಮಗೆ ತೋಚಿದಂತೆ ಪರಿಷ್ಕರಿಸುವುದು ಸರಿಯೇ..? ಎಂದು ಯಕ್ಷಗಾನದ ಆಧುನಿಕ ಪಲ್ಲಟಗಳನ್ನು ಅರ್ಥದಾರಿ, ಕಲಾವಿದ ರಾಧಾಕೃಷ್ಣ ಕಲ್ಚಾರ್ ಪ್ರಶ್ನಿಸಿದರು. ಕಲೆಯಲ್ಲಿ ಪೂರ್ವಿಕರ ಉದ್ದೇಶ, ಆಶಯಗಳೇನಿತ್ತು ಎಂಬುದನ್ನು ಅರ್ಥೈಸದೇ, ಸಮಗ್ರ ಕಲಾ ಔಚಿತ್ಯಗಳರಿಯದೇ ವರ್ತಮಾನದಲ್ಲಿ ತಮಗೆ ತೋಚಿದಂತೆ ತಮ್ಮ ವೈಯ್ಯಕ್ತಿಕ ಜನಪ್ರಿಯತೆಗಾಗಿ ಯಕ್ಷಗಾನಕ್ಕೆ ಪೂರಕವಲ್ಲದ ಪರಿಷ್ಕರಣೆ, ಬದಲಾವಣೆ ತರುವುದು ಯೋಗ್ಯವಲ್ಲ. ಹೊಸ, ಹೊಸ ಕಸಿಕಟ್ಟಿದ ಪರಿಷ್ಕಾರ, ಗಿಮಿಕ್ ಗಳಿಂದ ಯಕ್ಷಗಾನದ ಮೂಲಸ್ವರೂಪದ ಪರಿಮಳ, ರುಚಿ ಕೆಡುತ್ತಿದೆ ಎಂದು ಅವರು ನುಡಿದರು.
ಕುರುಡಪದವು ವಿಠಲಶಾಸ್ತ್ರಿ ಸ್ಮಾರಕ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಕುರಿಯ ವಿಠಲ ಶಾಸ್ತ್ರಿ ಮೇಮೋರಿಯಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ಸಂಸ್ಮರಣೆ, ಪ್ರಶಸ್ತಿಪ್ರದಾನ ಮತ್ತು ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳ ಬಯಲಾಟ ಪ್ರದರ್ಶನ ಸಮಾರಂಭದಲ್ಲಿ ಅವರು ಕುರಿಯ ವಿಠಲ ಶಾಸ್ತ್ರಿಗಳನ್ನು ಸಂಸ್ಮರಿಸಿ ಮಾತನಾಡಿದರು.
ಇಂದು ಯಕ್ಷಗಾನದಲ್ಲಿ ಪ್ರಯೋಗಗಳು ಹೆಚ್ಚಿದೆ. ನಾನು ಪ್ರಯೋಗಗಳನ್ನು ಆಕ್ಷೇಪಿಸುವವನಲ್ಲ. ಆದರೆ ಕುರಿಯ ಶಾಸ್ತ್ರಿಗಳು ಸಹಿತ ಹಿಂದಿನವರಿಗೆ ಕಲೆಯ ಔಚಿತ್ಯದ ಆಶಯ, ಸ್ಪಷ್ಟ ಧೋರಣೆಗಳಿತ್ತು. ಆದರೆ ಇಂದು ಕಲಾವಿದರ ವ್ಯಕ್ತಿಗತ ಧೋರಣೆಯಂತೆ, ಕೇವಲ ಜನಪ್ರಿಯತೆಯ ತೆವಲಿಗಾಗಿ ಪ್ರಯೋಗ, ಪರಿವರ್ತನೆ ಮಾಡಲಾಗುತ್ತದೆ. ಈ ಸೂಕ್ಷ್ಮವನ್ನು ಕಲಾವಿದರಿಗಿಂತ ಹೆಚ್ಚು ಪ್ರೇಕ್ಷಕರು ಅರಿತುಕೊಳ್ಳಬೇಕಾದ ಅನಿವಾರ್ಯತೆ ಇಂದು ಎದುರಾಗಿದೆ ಎಂದು ಕಲ್ಚಾರ್ ನುಡಿದರು.
ಪ್ರಶಸ್ತಿ ಪ್ರದಾನ:
ಕಾರ್ಯಕ್ರಮದಲ್ಲಿ ಪಾರ್ತಿಸುಬ್ಬ ಯಕ್ಷಗಾನ ಕಲಾಕೇಂದ್ರದ ಮಾಜಿ ಅಧ್ಯಕ್ಷ ಶಂಕರ ರೈ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ವತಿಯಿಂದ ನೀಡಲಾಗುತ್ತಿರುವ ಈ ಸಾಲಿನ ಕುರಿಯ ವಿಠಲಶಾಸ್ತ್ರಿ ಸ್ಮಾರಕ ಪ್ರಶಸ್ತಿಯನ್ನು ಹಿರಿಯ ಕಲಾವಿದ ಪೂಕಳ ಲಕ್ಷ್ಮೀನಾರಾಯಣ ಭಟ್, ಭಾಗವತ ಕುರಿಯ ಗಣಪತಿ ಶಾಸ್ತ್ರಿ ಪ್ರಾಯೋಜಕತ್ವದಲ್ಲಿ ನೀಡಲಾಗುವ ನೆಡ್ಲೆ ನರಸಿಂಹ ಭಟ್ ಪ್ರಶಸ್ತಿಯನ್ನು ನೆಡ್ಲೆಯವರ ಶಿಷ್ಯ, ತೆಂಕುತಿಟ್ಟಿನ ಅನುಭವೀ ಹಿಮ್ಮೇಳ ವಾದಕ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ, ವೇಷಧಾರಿ ಕರುವೋಳು ದೇರಣ್ಣ ಶೆಟ್ಟಿ ಸ್ಮಾರಕ ಪ್ರಶಸ್ತಿಯನ್ನು ತೆಂಕುತಿಟ್ಟಿನ ಹಿರಿಯ ಕಲಾವಿದ ಕುಡಾನ ಗೋಪಾಲಕೃಷ್ಣ ಭಟ್ಟರಿಗೆ ಅವರ ಅನುಪಸ್ಥಿತಿಯಲ್ಲಿ ಅವರ ಶ್ರೀಮತಿ ಕುಡಾನ ಸಾವಿತ್ರಿ ಅಮ್ಮನವರಿಗೆ ನೀಡಲಾಯಿತು. ಪ್ರಶಸ್ತಿ ವಿಜೇತ ಮೂವರು ಕಲಾವಿದರ ಕಲಾಸಾಧನೆಗಳನ್ನುಲ್ಲೇಖಿಸಿ ಕಾಸರಗೋಡಿನ ನ್ಯಾಯವಾದಿ ಪೆರುವೋಡಿ ರಾಮಕೃಷ್ಣ ಭಟ್ ಅಭಿನಂದನಾ ಭಾಷಣ ಮಾಡಿದರು.
ವೇದಿಕೆಯಲ್ಲಿ ರಂಗನಾಯಕ ಕುರಿಯ ಗಣಪತಿ ಶಾಸ್ತ್ರಿ, ಕುರಿಯ ವೆಂಕಟ್ರಮಣ ಭಟ್, ಚಂದ್ರಶೇಖರ ಭಟ್ ಕುಡಾನ, ಟ್ರಸ್ಟ್ ಮುಖ್ಯಸ್ಥ ಕುರಿಯ ಗೋಪಾಲಕೃಷ್ಣ ಶಾಸ್ತ್ರಿ ಉಪಸ್ಥಿತರಿದ್ದರು. ಸೇರಾಜೆ ಶ್ರೀನಿವಾಸ ಭಟ್ ಕಾರ್ಯಕ್ರಮ ನಿರೂಪಿಸಿದರು. ಕುರಿಯ ಗೋಪಾಲಕೃಷ್ಣ ಭಟ್ ಆಶಯ ನುಡಿದು, ಸ್ವಾಗತಿಸಿದರು. ಪೂನಾದಲ್ಲಿ ಯಕ್ಷಗಾನ ವಿಸ್ತರಿಸುತ್ತಿರುವ ಮದಂಗಲ್ಲು ಆನಂದ ಭಟ್, 8 ದಶಕಗಳ ಯಕ್ಷಚರಿತ್ರೆ ಬಲ್ಲ ಕೆ.ವಿ ಭಟ್ ಬೆಳ್ಳಾರೆ, ಪತ್ರಕರ್ತ ಎಂ.ನಾ.ಚಂಬಲ್ತಿಮಾರ್ ಉಪಸ್ಥಿತರಿದ್ದರು.
ಜನಮನ ಸೆಳೆದ ಮಕ್ಕಳ ಬಯಲಾಟ:
ಕಾರ್ಯಕ್ರಮಕ್ಕೂ ಮುನ್ನ ಆರಂಭದಲ್ಲಿ ಪ್ರಣತಿ ಚೈತನ್ಯಕೃಷ್ಣ ಪದ್ಯಾಣ ಇವರಿಂದ ಭರತನಾಟ್ಯ, ಬಳಿಕ ಕುರಿಯ ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ದಕ್ಷಯಜ್ಞ ಬಯಲಾಟ ಜರುಗಿತು. ಬಳಿಕ ಪಂಚವಟಿ, ಅಗ್ರಪೂಜೆ, ಧರ್ಮಸಂಘರ್ಷ, ಧುಶ್ಶಾಸನವಧೆ ಬಯಲಾಟಗಳು ಕೇಂದ್ರದ ವಿದ್ಯಾರ್ಥಿಗಳಿಂದ ಪ್ರಸ್ತುತಿಗೊಂಡಿತು. ಇತ್ತೀಚಿನ ದಶಕದಲ್ಲಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಂದಲೇ ಇಡೀ ರಾತ್ರಿಯ ಆಟ ನಡೆದದ್ದು ಅಪೂರ್ವ. ಅದರಲ್ಲೂ 50ರಷ್ಟು ವಿದ್ಯಾರ್ಥಿಗಳು 85ರಷ್ಟು ಪಾತ್ರ ನಿರ್ವಹಿಸಿ, ಅಪೂರ್ವ ರಂಗನಡೆಗಳ ದುಶ್ಶಾಸನವಧೆ ಸಹಿತ ಐದು ಪ್ರದರ್ಶನ ನೀಡಿದ್ದಾರೆ. ಇಡೀ ರಾತ್ರಿ ತುಂಬಿದ ಸಭೆ ಆಟ ಆಸ್ವಾದಿಸಿ ಪ್ರಶಂಸಾ ನುಡಿಗಳೊಂದಿಗೆ ಮಕ್ಕಳನ್ನು ಅಭಿನಂದಿಸಿದ್ದಾರೆ. ರಮೇಶ ಶೆಟ್ಟಿ ಬಾಯಾರು ಅವರ ಯಕ್ಷಶಿಕ್ಷಣದಲ್ಲಿ ಇಲ್ಲಿನ ವಿದ್ಯಾರ್ಥಿಗಳು ರೂಪುಗೊಂಡಿದ್ದಾರೆ.