ಕಾಸರಗೋಡು: ಕಾಸರಗೋಡು ಜಿಲ್ಲಾ ಮಾಹಿತಿ ಕೇಂದ್ರದ ಸಾರಥಿಯಾಗಿ ಜನಪರ ವ್ಯಕ್ತಿತ್ವ ಮೆರೆದ, ಕನ್ನಡಿಗ ಸಿಬ್ಬಂದಿ ಮಹಾಲಿಂಗ ನಾಯ್ಕ್ ಪಿ. ಸೇವೆಯಿಂದ ನಿವೃತ್ತರಾಗಿದ್ದಾರೆ.
ಕಳೆದ 11 ವರ್ಷಗಳಿಂದ ಜಿಲ್ಲಾ ಮಾಹಿತಿ ಕೇಂದ್ರದಲ್ಲಿ ವಾಹನಚಾಲಕರಾಗಿ ಅವರು ಸೇವೆ ಸಲ್ಲಿಸಿದ್ದಾರೆ. ಶಾಲಾ ಕಲಿಕೆಯ ನಂತರ ಆಟೋಚಾಲಕ, ಟಾಕ್ಸಿ ಚಾಲಕ, ಬಸ್ ಕಂಡೆಕ್ಟರ್ ಇತ್ಯಾದಿ ಉದ್ಯೋಗದಲ್ಲಿ ಅವರು ತೊಡಗಿಕೊಂಡಿದ್ದರು. 2003ರಲ್ಲಿ ಪಿಲಾಂಕಟ್ಟೆ ಕಿರಿಯ ಪ್ರಾಥಮಿಕಶಾಲೆಯಲ್ಲಿ ತಾತ್ಕಾಲಿಕ ಶಿಕ್ಷಕೇತರ ಸಿಬ್ಬಂದಿಯಾಗಿ ಕರ್ತವ್ಯಕ್ಕೆ ಸೇರಿದ್ದರು. 2008 ಏ.28ರಂದು ಜಿಲ್ಲಾ ಮಾಹಿತಿ ಕೇಂದ್ರದಲ್ಲಿ ವಾಹನ ಚಾಲಕರಾಗಿಕರ್ತವ್ಯ ಆರಂಭಿಸಿದ್ದರು.
ಬದಿಯಡ್ಕ ಬಳಿಯ ಕಾಡಮನೆ ಪೆಮುರ್ಂಡ ನಿವಾಸಿಯಾಗಿರುವ ಮಹಾಲಿಂಗನಾಯ್ಕ್ ಅವರು ತಮ್ಮೂರಲ್ಲಿ ಬಾಬು ನಾಯ್ಕ್ ಎಂದು ಪ್ರಸಿದ್ಧರು. ಎಲ್ಲರಿಗೂ ಬೇಕಾದವರಾಗಿ ಜನಪರರರಾಗಿ ಬದುಕುತ್ತಿರುವುದು ಅವರ ದೊಡ್ಡ ಗುಣ.
ವಾಹನ ಚಾಲಕ ಎಂಬ ಕಾರಣಕ್ಕೆ ಆ ಉದ್ಯೋಗಕ್ಕಷ್ಟೇ ಸೀಮಿತರಾಗದ ಮಹಾಲಿಂಗನಾಯ್ಕ್ ಅವರು ಕಚೇರಿಯ ಇತರ ಸಣ್ಣಪುಟ್ಟ ಜವಾಬ್ದಾರಿಗಳನ್ನೂ ನಿರ್ವಹಿಸಿ ಮೆಚ್ಚುಗೆಗೆ ಪಾತ್ರರಾದವರು. ಅಧಿಕಾರಿಗಳನ್ನು ಕ್ಲಪ್ತ ಸಮಯಕ್ಕೆ
ತಿಳಿಸಿದ ಜಾಗಗಳಿಗೆ ತಲಪಿಸುವ ಇತ್ಯಾದಿ ಚಟುವಟಿಕೆಗಳಲ್ಲೂ ಪ್ರಾಮಾಣಿಕತೆ ಮೆರೆದವರು. ಸೇವೆಯ ಅವಧಿಯಲ್ಲಿಒಮ್ಮೆಯೂ ವಾಹನ ಅಪಘಾತ, ವಾಹನಕ್ಕೆ ತಾಂತ್ರಿಕ ಸಮಸ್ಯೆಗಳು ಇತ್ಯಾದಿ ಸಂಭವಿಸದಂತೆ ಬಹು ಕಾಳಜಿಯಿಂದ ಸೇವೆ ಸಲ್ಲಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಈ ಎಲ್ಲ ಹಿನ್ನೆಲೆಯಲ್ಲಿ ಹಿರಿಯ ಶ್ರೇಣಿಯ (ಸೀನಿಯರ್ ಗ್ರೇಡ್) ಸಿಬ್ಬಂದಿಯಾಗಿ ಬಡ್ತಿ ಪಡೆದು ಅವರು ನಿವೃತ್ತರಾಗಿದ್ದಾರೆ.
ಕಚೇರಿಯ ಸಿಬ್ಬಂದಿಯನ್ನು ತಮ್ಮಮನೆಯ ಮಂದಿಯಂತೆಯೇ ಕಾಣುತ್ತಿದ್ದ ಮಹಾಲಿಂಗನಾಯ್ಕ್ ಅವರು ತಮಗಾಗಿ ಮನೆಯಿಂದ ತರುತ್ತಿದ್ದ ಖಾದ್ಯ, ಭೋಜನ ಇತ್ಯಾದಿಗಳನ್ನು ಇತರರೊಂದಿಗೆ ಹಂಚಿಕೊಂಡು ಸಂತಸ ಪಡುವ ಮನೋಧರ್ಮ ಹೊಂದಿದವರು.
Àಮ್ಮ ವಿವಾಹದ 26ನೇ ವರ್ಷಾಚರಣೆಯನ್ನೂ ಈ ಬಾರಿ ಮಹಾಲಿಂಗ ನಾಯ್ಕ್ ತಮ್ಮ ನಿವಾಸದಲ್ಲಿ ಸಂಭ್ರಮದಿಂದ ಆಚರಿಸಿದ್ದರು. ಪತ್ನಿ ಲಕ್ಷ್ಮಿ ಅವರು ಇವರ ಎಲ್ಲ ಯಶಸ್ಸಿನ ಹಿಂದೆ ಬೆನ್ನೆಲುಬಾಗಿನಿಂತವರು. ಮೂವರು ಪುತ್ರಿಯರಲ್ಲಿ ಒಬ್ಬರ ವಿವಾಹ ನಡೆದಿದ್ದು, ಒಬ್ಬರು ಉದ್ಯೋಗದಲ್ಲಿದ್ದಾರೆ. ಇನ್ನೊಬ್ಬರು ಕಲಿಕೆ ನಡೆಸುತ್ತಿದ್ದಾರೆ. ಒಬ್ಬ ಪುತ್ರನೂ ಕಲಿಕೆಯ ಹಂತದಲ್ಲಿದ್ದಾರೆ.