ಕೊಚ್ಚಿ: ಕೇರಳದ ಕೋತಮಂಗಲಂನ ಫಾದರ್ ಜಿಸ್ ಜೋಸ್ ಕಿಝಕೆಲ್ ಎಲ್ಲರಂತೆ ಸಾಮಾನ್ಯ ಪಾದ್ರಿಯಲ್ಲ. ಈಗ ಭಾರತೀಯ ಸೇನೆಯಲ್ಲಿ ನಾಯಕ್ ಸುಬೆದಾರ್ ಆಗಿರುವ ಫಾದರ್ ಕಿಝಕೆಲ್, ತಮ್ಮ ಪಾದ್ರಿ ಉಡುಪನ್ನು ಬದಿಗಿಟ್ಟು ಸೇನೆಯ ಉಡುಪು ತೊಟ್ಟಿದ್ದಾರೆ.
ಕಳೆದ ಶನಿವಾರ ಪುಣೆಯ ನ್ಯಾಶನಲ್ ಇಂಟಗ್ರೇಶನ್ ಇನ್ಸ್ಟ್ ಟ್ಯೂಟ್ ನಲ್ಲಿ ನಾಯಕ್ ಸುಬೇದಾರ್ ಆಗಿ ಅಧಿಕಾರ ವಹಿಸಿಕೊಂಡರು. ಭಾರತೀಯ ಸೇನೆಯ ಜೂನಿಯರ್ ಕಮಿಷನ್ಡ್ ಆಫೀಸರ್ (ಧಾರ್ಮಿಕ ಶಿಕ್ಷಕ)ರಾಗಿ ನೇಮಕಗೊಂಡಿದ್ದಾರೆ.
2015ರಲ್ಲಿ ಭಾರತೀಯ ಸೇನೆಗೆ ಸೇರಿದ್ದ ಫಾದರ್ ಕಿಝಕ್ಕೆಲ್ ಸಮಾಜ ಸುಧಾರಣೆಗೆ ವಿಭಿನ್ನ ಹಾದಿ ತುಳಿಯಲು ಪ್ರಯತ್ನಿಸಿದ್ದರು. ಅವರ ಜೊತೆ ಇನ್ನೂ 18 ಜನ ಸಿಬ್ಬಂದಿ ಸೇನೆಯಲ್ಲಿ ಕಲೆ, ಗ್ರಂಥ, ಧಾರ್ಮಿಕ ಮತ್ತು ಸಂಪ್ರದಾಯಗಳನ್ನು ಸೇನೆಯ ಅಧಿಕಾರಿಗಳು, ಜವಾನರು ಮತ್ತು ಅವರ ಕುಟುಂಬ ವರ್ಗದವರಿಗೆ ಹೇಳಿಕೊಡಲಿದ್ದಾರೆ. ತಮ್ಮ ತಮ್ಮ ಘಟಕಗಳಲ್ಲಿ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಹಬ್ಬಹರಿದಿನಗಳನ್ನು ಆಚರಿಸಲಿದ್ದಾರೆ.
ಯುಪಿಎಸ್ ಸಿ ವೆಬ್ ಸೈಟ್ ನಲ್ಲಿ ಭಾರತೀಯ ಸೇನೆಯಲ್ಲಿ ಧಾರ್ಮಿಕ ಬೋಧಕರ ಹುದ್ದೆಗೆ ಆಹ್ವಾನಿಸಿದಾಗ ಅರ್ಜಿ ಹಾಕೋಣವೆನಿಸಿತು. ಚರ್ಚ್ ನಲ್ಲಿ ಪಾದ್ರಿಯಾದ ನಂತರ ದೇಶಕ್ಕಾಗಿ ಮತ್ತು ದೇಶಕ್ಕಾಗಿ ನಿಸ್ವಾರ್ಥದಿಂದ ಸೇವೆ ಸಲ್ಲಿಸುವ ಸೈನಿಕರಿಗೆ ನಾನು ಮಾಡಬಹುದಾದ ಉತ್ತಮ ಸೇವೆ ಎಂದು ನನಗನಿಸಿತು. ಅರ್ಜಿ ಸಲ್ಲಿಸಿದೆ. ಕಳೆದ ವರ್ಷ ಶಾರೀರಿಕ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಧಾರ್ಮಿಕ ಬೋಧನೆ ತರಬೇತಿಗೆ ಆಯ್ಕೆಯಾದೆ ಎನ್ನುತ್ತಾರೆ ಫಾದರ್ ಕಿಝಕ್ಕೆಲ್.
ಸೇನೆಯಲ್ಲಿ ಸತತ 7 ವಾರಗಳ ಕಠಿಣ ಶಾರೀರಿಕ ತರಬೇತಿ ಮತ್ತು 11 ವಾರಗಳ ಧಾರ್ಮಿಕ ತರಬೇತಿ ನಡೆಯಿತು. ಅದರಲ್ಲಿ ಬೋಧನೆ, ತತ್ವಗಳು, ಸಂಪ್ರದಾಯಗಳನ್ನು ಹೇಳಿಕೊಡಲಾಯಿತು. ಸೇನೆಯ ಜ್ಯೂನಿಯರ್ ಕಮಿಷನ್ಡ್ ಆಫೀಸರ್ ಆಗಿ ನೇಮಕಗೊಳ್ಳುವ ಮೊದಲು ಈ ತರಬೇತಿ ಕಡ್ಡಾಯ ಎನ್ನುತ್ತಾರೆ.
ವಲ್ಸ ಜೋಸ್ ಮತ್ತು ದಿವಂಗತ ಜೋಸ್ ವರ್ಗೀಸ್ ಅವರ ಪುತ್ರರಾಗಿರುವ ಫಾದರ್ ಕಿಝಕ್ಕೆಲ್ ವಡವತೂರಿನ ಸೈಂಟ್ ಥಾಮಸ್ ಅಪೊಸ್ಟೊಲಿಕ್ ಸೆಮಿನರಿಯಲ್ಲಿ ದೈವಶಾಸ್ತ್ರ ಅಧ್ಯಯನ ಮಾಡಿ ನಂತರ ತತ್ವಶಾಸ್ತ್ರವನ್ನು ಕಲ್ಲಿಕೋಟೆ ವಿಶ್ವವಿದ್ಯಾಲಯದಲ್ಲಿ ಹಾಗೂ ಬಿಸಿಎ ಮತ್ತು ಎಂಸಿಎ ವ್ಯಾಸಂಗವನ್ನು ಭರತಿಯಾರ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದಾರೆ.
ಭಾರತೀಯ ಸೇನೆಯಲ್ಲಿ ಧಾರ್ಮಿಕ ಬೋಧಕರ ನೇಮಕದ ಉದ್ದೇಶ ರಾಷ್ಟ್ರೀಯ ಸಮಗ್ರತೆ, ಐಕ್ಯತೆ, ಧಾರ್ಮಿಕ ಸಹಿಷ್ಣುತೆಯನ್ನು ಹೇಳಿಕೊಡುವುದು ಆಗಿದೆ. ಆ ಹುದ್ದೆ ನಿಭಾಯಿಸುವುದು ಕಷ್ಟ. ಆದರೆ ಅದನ್ನು ಖುಷಿಯಿಂದ ಮಾಡುತ್ತೇನೆ ಎನ್ನುತ್ತಾರೆ ಫಾದರ್ ಕಿಝಕ್ಕೆಲ್.