ಬದಿಯಡ್ಕ: ಯುವ ಲೇಖಕಿ ಚೇತನಾ ಕುಂಬಳೆ ಅವರ ಗಝಲ್ ಸಂಕಲನ "ನಸುಕಿನಲ್ಲಿ ಬಿರಿದ ಹೂಗಳು" ಹಾಗೂ ವಿಮರ್ಶಾ ಸಂಕಲನ "ಪಡಿನೆಳಲು" ಕೃತಿಗಳ ಲೋಕಾರ್ಪಣೆ ಸಮಾರಂಭ ನೇಸರ ಪ್ರಕಾಶನ ಕುಂಬಳೆ ಸಹಯೋಗದಲ್ಲಿ ಇಂದು (ಮೇ.4) ಬೆಳಿಗ್ಗೆ9.30 ರಿಂದ ಬದಿಯಡ್ಕದ ರಾಮಲೀಲಾ ಸಭಾಂಗಣದಲ್ಲಿ ನಡೆಯಲಿದೆ.
ಹಿರಿಯ ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು ಅಂತರಾಷ್ಟ್ರೀಯ ಚಿತ್ರಕಲಾವಿದ ಪಿ.ಎಸ್.ಪುಣಿಚಿತ್ತಾಯ ಉದ್ಘಾಟಿಸುವರು. ನಿವೃತ್ತ ಶಿಕ್ಷಕಿ ಸರಸ್ವತಿ ಎಚ್.ನಸುಕಿನಲ್ಲಿ ಬಿರಿದ ಹೂಗಳು ಗಝಲ್ ಸಂಕಲನ ಬಿಡುಗಡೆಗೊಳಿಸುವರು. ಕವಿ, ಸಾಹಿತಿ, ಮಂಗಳೂರು ಆಕಾಶವಾಣಿಯ ನಿವೃತ್ತ ನಿಲಯ ನಿರ್ದೇಶಕ ಡಾ.ವಸಂತಕುಮಾರ್ ಪೆರ್ಲ ಕೃತಿ ಪರಿಚಯ ಮಾಡುವರು. ಪಡಿನೆಳಲು ವಿಮರ್ಶಾ ಸಂಕಲನವನ್ನು ಕವಯಿತ್ರಿ, ರಂಗನಟಿ ಪೂರ್ಣಿಮಾ ಸುರೇಶ್ ಬಿಡುಗಡೆಗೊಳಿಸುವರು. ಉಪನ್ಯಾಸಕಿ ಲಕ್ಷ್ಮೀ ಕೆ ಕೃತಿಪರಿಚಯ ಮಾಡುವರು. ಲೇಖಕಿ ಚೇತನಾ ಕುಂಬಳೆ, ಮೇಘನಾ ರಾಜಗೋಪಾಲ, ಜಯ ಮಣಿಯಂಪಾರೆ ಮೊದಲಾದವರು ಉಪಸ್ಥಿತರಿರುವರು. ಖ್ಯಾತ ಗಝಲ ಗಾಯಕ ಹಿದಾಯತ್ ಕಂಡಲೂರಿ, ಮೊಹಮ್ಮದ್ ಅಝೀಂ ಮಣಿಮುಂಡ, ಮೊಹಮ್ಮದ್ ಅಶ್ವಾಕ್ ಮಣಿಮುಂಡ ಮೊದಲಾದವರಿಂದ ಗಝಲ್ ಗಾಯನ, ಗಝಲ್ ಉಪನ್ಯಾಸ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ.