ಬದಿಯಡ್ಕ: ನಾರಂಪಾಡಿ ಗುತ್ತು ದೈವಸ್ಥಾನದ ಮುಂಭಾಗದಲ್ಲಿ ಯಕ್ಷಮಿತ್ರರು ನಾರಂಪಾಡಿ ಇದರ ಆಶ್ರಯದಲ್ಲಿ ನಡೆದ ಯಕ್ಷಗಾನ ಬಯಲಾಟ ವೇದಿಕೆಯಲ್ಲಿ ಯಕ್ಷಗಾನದ ಹಿರಿಯ ಹಾಗು ಪ್ರಸಿದ್ಧ ಕಲಾವಿದ ಬೋಳಾರ ಸುಬ್ಬಯ್ಯ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.
ಸುಬ್ಬಯ್ಯ ಶೆಟ್ಟಿ ಅವರು ಸುಮಾರು 50 ವರ್ಷಗಳ ಸುದೀರ್ಘಕಾಲ ಯಕ್ಷಗಾನದಲ್ಲಿ ನೂರಾರು ಪಾತ್ರಗಳಿಗೆ ಜೀವ ತುಂಬಿ ಯಕ್ಷ ಲೋಕದ ಮೇರು ನಟರಾಗಿ ಇಂದಿಗೂ ಕೂಡ ಕಲಾಭಿಮಾನಿಗಳ ಹೃದಯದಲ್ಲಿ ಮಿಂಚುತ್ತಿದ್ದಾರೆ. ಈ ಹಿರಿಯ ಚೇತನವನ್ನು ಗೌರವಿಸುವ ಉದ್ದೇಶದಿಂದ ನಡೆಸಿದ ಸಮ್ಮಾನ ಕಾರ್ಯಕ್ರಮದಲ್ಲಿ ನಾರಂಪಾಡಿಗುತ್ತು ಬಾಲಕೃಷ್ಣ ರೈ ಹಾಗು ಅವರ ಪತ್ನಿ ಲತಾ ಬಿ.ರೈ ನಾರಂಪಾಡಿ ಅವರು ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಿದರು. ಶಿವದಾಸ್ ರೈ ನಾರಂಪಾಡಿ ಅವರು ಸಮ್ಮಾನ ಪತ್ರ, ಸ್ಮರಣಿಕೆ ನೀಡಿದರು.
ಮೇಳದ ವ್ಯವಸ್ಥಾಪಕ ಎಂ.ಸುರೇಶ ಮಲ್ಲಿ ಅವರು ಅಭಿನಂದನಾ ಭಾಷಣ ಮಾಡಿದರು. ಯಕ್ಷಮಿತ್ರದ ಅಧ್ಯಕ್ಷ ನಾರಂಪಾಡಿ ಗುತ್ತು ರವೀಂದ್ರನಾಥ ಭಂಡಾರಿ, ತ್ಯಾಗರಾಜ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮನೋಹರ ಶೆಟ್ಟಿ ಚಟ್ಲ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಬೆಂಕಿನಾಥೇಶ್ವರ ಮೇಳದವರಿಂದ `ಮಹಿಮೆದ ಮಂತ್ರ ದೇವತೆ' ಯಕ್ಷಗಾನ ಬಯಲಾಟ ಜರಗಿತು.