ಕಾಸರಗೋಡು: ಕೇರಳದಲ್ಲಿ ಸಹಕಾರಿ ಸಂಸ್ಥೆಗಳ ಸಿಬ್ಬಂದಿಗಳ ತುಟ್ಟಿ ಭತ್ತೆಯನ್ನು ಹೆಚ್ಚಿಸಲಾಗಿದೆ. ವಿತರಿಸಲು ಬಾಕಿಯಿರುವ 15 ತಿಂಗಳ ಮೊತ್ತವನ್ನು ಮುಂದಿನ ತಿಂಗಳ ವೇತನದ ಜೊತೆಗೆ ವಿತರಿಸಲು ಸಹಕಾರಿ ಇಲಾಖೆಯು ನಿರ್ಧರಿಸಿದೆ.
ರಾಜ್ಯದ ಸರಕಾರಿ ಸಿಬ್ಬಂದಿಗಳು ಮತ್ತು ಅಧ್ಯಾಪಕರ ತುಟ್ಟಿ ಭತ್ತೆಯನ್ನು ಇತ್ತೀಚೆಗಷ್ಟೇ ಏರಿಸಲಾಗಿತ್ತು. ಅದರ ಬೆನ್ನಲ್ಲೇ ಈಗ ಸಹಕಾರಿ ಸಂಸ್ಥೆಗಳ ತುಟ್ಟಿ ಭತ್ತೆಯನ್ನು ಹೆಚ್ಚಿಸಿ ಸಹಕಾರಿ ಇಲಾಖೆಯು ಅಧಿಸೂಚನೆ ಹೊರಡಿಸಿದೆ. ಸಹಕಾರಿ ಸಿಬ್ಬಂದಿಗಳ 2018ನೇ ಜನವರಿ 1ರಿಂದ 2019ನೇ ಮಾರ್ಚ್ 31ರ ತನಕ ಬಾಕಿಯಿರುವ ತುಟ್ಟಿ ಭತ್ತೆಯನ್ನು ಜೊತೆಗೆ ಮಂಜೂರು ಮಾಡಲಾಗಿದೆ.
ವೇತನ ಪರಿಷ್ಕರಣೆ ಅನುಷ್ಠಾನಕ್ಕೆ ಬಂದ ಬಳಿಕ ವೇತನದಲ್ಲಿ ಹೆಚ್ಚಳ ಉಂಟಾದ ಸಿಬ್ಬಂದಿಗಳಿಗೆ ಅವರ ತುಟ್ಟಿ ಭತ್ತೆಯಲ್ಲೂ ಶೇ.9ರಷ್ಟು ಹೆಚ್ಚಳವಾಗಿದೆ. ಹೀಗೆ ವೇತನದ ಜೊತೆಗೆ ಅವರಿಗೆ ಒಟ್ಟಾಗಿ ಶೇ.121ರಷ್ಟು ತುಟ್ಟಿ ಭತ್ತೆ ಲಭಿಸಲಿದೆ. ವೇತನ ಪರಿಷ್ಕರಣೆ ಜಾರಿಗೊಳ್ಳದ ಸಹಕಾರಿ ಸಿಬ್ಬಂದಿಗಳ ತುಟ್ಟಿ ಭತ್ತೆಯಲ್ಲಿ ಶೇ.13ರಷ್ಟು ಏರಿಕೆ ಉಂಟಾಗಿದೆ.