ಮಂಜೇಶ್ವರ: ಅನಾಥರ ಅಭಯ ಕೇಂದ್ರ, ಮತಿ ವಿಕಲರ ಆಶ್ರಯ ತಾಣವಾಗಿರುವ ಮಂಜೇಶ್ವರ "ಸ್ನೇಹಾಲಯ"ಕ್ಕೆ ಹೊಸ ಇಬ್ಬರು ಅತಿಥಿಗಳ ಸೇರ್ಪಡೆಯಾಗಿದೆ. ಮಾನಸಿಕ ತಾಳ ತಪ್ಪಿ ಗೊತ್ತು ಗುರಿಯಿಲ್ಲದೆ ಅಲೆದಾಡಿ ಸಮುದ್ರಕ್ಕೆ ಹಾರಿ ಬದುಕನ್ನೇ ಕೊನೆಗೊಳಿಸಲು ಮುಂದಾದ ದೀನ ಮಹಿಳೆ, ಕೇರಳ ಮೂಲದ ಪೂಮಾಣಿ (38) ಹಾಗೂ ಮತಿ ವಿಕಲತೆಯ ಫಲವಾಗಿ ಹಿಂಸಾ ಪ್ರವೃತ್ತಿ ಪ್ರದರ್ಶಿಸುತ್ತಾ ಸಮಾಜಕ್ಕೆ ಉಪಟಳವಾಗಿ ಪರಿಣಮಿಸಿದ ಬೆಳ್ತಂಗಡಿ ಸಮೀಪದ ಲೂಯಿಸ್ ಲೋಬೋ (54) ಇನ್ನು ಸ್ನೇಹಾಲಯದ ಆರೈಕೆಯಲ್ಲಿ ಸುರಕ್ಷಿತರು.
ಮೇ. 30 ರಂದು ಗುರುವಾರ ಮಂಗಳೂರಿನ ಪಣಂಬೂರು ತೀರದಿಂದ ಮಧ್ಯವಯಸ್ಕೆ ಮಹಿಳೆಯು ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ, ಅದೃಷ್ಟವಶಾತ್ ಅಲ್ಲಿನ ಜೀವ ರಕ್ಷಕ ಈಜು ಪಟುಗಳು ಈಜಿ ಆಕೆಯನ್ನು ದಡ ಸೇರಿಸಿದ್ದು, ಅವರನ್ನು ಪಣಂಬೂರು ಪೊಲೀಸು ಠಾಣೆಗೆ ಕರೆದೊಯ್ದು ಹಾಜರುಪಡಿಸಿದ್ದರು. ತೀವ್ರ ಆಕ್ರಮಣ ಶಾಲಿಯಾಗಿದ್ದ ಮಹಿಳೆಯು ವಿಚಿತ್ರ ರೀತಿಯಲ್ಲಿ ಕಿರುಚಾಡುತ್ತಿದ್ದರು. ಅವರ ಸ್ಥಿತಿಯನ್ನು ಅರ್ಥೈಸಿದ ಪಣಂಬೂರು ಪೊಲೀಸರು ತಕ್ಷಣವೇ ಸ್ನೇಹಾಲಯಕ್ಕೆ ಮಾಹಿತಿ ನೀಡಿದ್ದು, ಬ್ರದರ್ ಜೋಸೆಫ್ ಕ್ರಾಸ್ತಾ ನೇತೃತ್ವದಲ್ಲಿ ತೆರಳಿದ ಕಾರ್ಯಕರ್ತರು ಆ ಮಹಿಳೆಯನ್ನು ಸ್ನೇಹಾಲಯದ ಮಾನಸಿಕ ಅಸ್ವಸ್ಥ ಮಹಿಳೆಯರ ಪುನಶ್ಚೇತನ ಕೇಂದ್ರಕ್ಕೆ ಕರೆ ತಂದರು. ಸೂಕ್ತ ರೀತಿಯಲ್ಲಿ ಪ್ರಾಥಮಿಕ ಆರೈಕೆಯನ್ನಿತ್ತು ಇದೀಗ ಮಂಗಳೂರಿನ ಯೇನಪೋಯ ಆಸ್ಪತ್ರೆಯ ಮಾನಸಿಕ ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಗಿದೆ. ಸದ್ಯ ಅವರು ಚೇತರಿಕೆಯ ಹಾದಿಯಲ್ಲಿದ್ದು, ತನ್ನ ಹೆಸರು ಪೂಮಾಣಿ ಎಂದು ತಿಳಿಸಿದ್ದಾರೆ. ಆದರೆ, ಮನೆ ಮಂದಿಯನ್ನು ನೆನಪಿಸಲು ಇನ್ನೂ ಅಶಕ್ಯರಾಗಿದ್ದಾರೆ. ಕೇರಳದ ಕಾಸರಗೋಡು ಜಿಲ್ಲೆಯ ನೀಲೇಶ್ವರ ನಿವಾಸಿ ಎಂದು ತಿಳಿಯಲಾಗಿದ್ದು, ಅವರ ಆಶ್ರಿತರನ್ನು ಗುರುತಿಸುವ ಪ್ರಯತ್ನ ನಡೆಸಲಾಗುತ್ತಿದೆ.
ಮಂಗಳೂರು ಬೆಳ್ತಂಗಡಿ ಸಮೀಪ ಆರ್ವಾ ಎಂಬಲ್ಲಿ ಕುರುಚಲು ಗುಡಿಸಲಿನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಲೂಯಿಸ್ ಲೋಬೋ (53) ಅವರ ಸ್ಥಿತಿ ಇದಕ್ಕಿಂತಲೂ ಭಿನ್ನ. ಅವಿವಾಹಿತರಾಗಿರುವ ಅವರು ಕೆಲವೊಮ್ಮೆ ಸಹಜವಾಗೇ ಕಾಣುತ್ತಾರೆ. ಆದರೆ, ಇನ್ನು ಕೆಲವೊಮ್ಮೆ ಸಂಪೂರ್ಣ ಸ್ಥಿಮಿತ ಕಳಕೊಂಡು ಬಳಿಗೆ ಬಂದವರತ್ತ ಕಲ್ಲೆಸೆಯುವ, ಆಕ್ರಮಿಸುವ ಪ್ರವೃತ್ತಿ ಪ್ರದರ್ಶಿಸುತ್ತಾರೆ. ಇವರ ಈ ಸ್ಥಿತಿಯು ಊರ ನಾಗರಿಕರಲ್ಲಿ ಸಂಕಟ ಸೃಷ್ಟಿಸಿತು. ಅವರಿವರ ತೋಟದಲ್ಲಿ ಕೂಲಿಯಾಳಾಗಿ ಕೆಲಸ ಮಾಡುತ್ತಿದ್ದರೂ ಮನಸ್ಸಿನ ತಾಳ ತಪ್ಪಿದಾಗ ನೇರ ನಡೆದೇ ಬಿಡುತ್ತಾರೆ. ಸಿಕ್ಕ ಕಾಸಿನಲ್ಲಿ ಮದ್ಯ ಸೇವಿಸಿ ಅದರ ನಶೆಯಲ್ಲೇ ತೂರಾಡುತ್ತಾರೆ. ಯಾವುದೇ ಒಳ ಉಡುಪು ಧರಿಸದೆ ಚಿಂದಿ ಬೈರಾಸನ್ನೇ ಸೊಂಟಕ್ಕೆ ಸುತ್ತಿ ಬಹಿರಂಗವಾಗಿ ತಿರುಗಾಡುತ್ತಾ ನಾಗರಿಕರಲ್ಲಿ ಹೇಸಿಗೆ ಹುಟ್ಟಿಸುತ್ತಾರೆ. ಊರ ಮಂದಿಯ ಮಾಹಿತಿಯಂತೆ ಸ್ನೇಹಾಲಯ ಕಾರ್ಯಕರ್ತರು ತೆರಳಿ ಲೂಯಿಸ್ ಲೋಬೋರನ್ನು ತಮ್ಮ ಸ್ನೇಹದ ಮನೆಗೆ ಕರೆ ತಂದಿದ್ದಾರೆ. ಸದ್ಯ ಯೇನಪೋಯ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಂಬಂಧಿಕರು ತಲುಪಿ ಕರೆದೊಯ್ಯುವ ವರೆಗೆ ಅವರಿಗೆ ಆಶ್ರಯ, ಆರೈಕೆ ನೀಡುವುದಾಗಿ ಸ್ನೇಹಾಲಯದ ಮುಖ್ಯಸ್ಥ ಬ್ರದರ್ ಜೋಸೆಫ್ ಕ್ರಾಸ್ತಾ ತಿಳಿಸಿದ್ದಾರೆ.