ಕರಾಚಿ: ಬಂದರು ನಗರಿ ಗ್ವಾಡಾರ್ ನಲ್ಲಿನ ಲಕ್ಸುರಿ ಹೋಟೆಲ್ ವೊಂದಕ್ಕೆ ನಿನ್ನೆ ನುಗ್ಗಿದ್ದ ಶಸ್ತ್ರ ಸಜ್ಜಿತ ನಾಲ್ವರು ಉಗ್ರರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಿಯರ್ಲ್ ಕಾಂಟಿನೆಂಟಲ್ ಹೋಟೆಲ್ ಗೆ ನುಗ್ಗಿದ್ದ ಉಗ್ರರು ನಿರಂತರವಾಗಿ ಗುಂಡಿನ ದಾಳಿ ನಡೆಸಿದ್ದು, ಪ್ರವೇಶದ್ವಾರದಲ್ಲಿನ ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಭದ್ರತಾ ಪಡೆಗಳು ಹಾಗೂ ಉಗ್ರರ ನಡುವಣ ಗುಂಡಿನ ಕಾಳಗ ನಡೆದಿದ್ದು, ಎಲ್ಲಾ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಬಲೊಚಿಸ್ತಾನ ಗೃಹ ಸಚಿವ ಜಿಯಾವುಲ್ಲಾ ಲಾಂಗೌ ಹೇಳಿದ್ದಾರೆ. ಈ ವೇಳೆಯಲ್ಲಿ ಹೋಟೆಲ್ ನಲ್ಲಿದ್ದ ಕೆಲ ಅತಿಥಿಗಳಿಗೂ ಗಾಯಗಳಾಗಿವೆ . ಆದರೆ, ಎಷ್ಟು ಜನರಿಗೆ ಗಾಯವಾಗಿದೆ ಎಂಬುದರ ಬಗ್ಗೆ ತಿಳಿದುಬಂದಿಲ್ಲ ಎಂದು ತಿಳಿಸಿದ್ದಾರೆ.
ಬಲೊಚಿಸ್ತಾನ ಲಿಬರೇಷನ್ ಆರ್ಮಿ ದಾಳಿಯ ಹೊಣೆ ಹೊತ್ತುಕೊಂಡಿದೆ. ಮಜೀದ್ ಬ್ರಿಗೇಡ್ ಗ್ರೂಪ್ ನೊಂದಿಗೆ ಸಂಪರ್ಕ ಹೊಂದಿದ್ದ ಉಗ್ರರೊಂದಿಗೆ ದಾಳಿ ನಡೆಸಲಾಯಿತು ಎಂದು ಹೇಳಿಕೊಂಡಿದೆ.
ಹೋಟೆಲ್ ಗೆ ಉಗ್ರರು ನುಗ್ಗಿದ್ದ ನಂತರ ಗುಂಡಿನ ಶಬ್ದ ಕೇಳಿಬಂದಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಗ್ವಾಡಾರ್ ಚೀನಾ- ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ನ ಪ್ರಮುಖ ಸ್ಥಳಗಳಲ್ಲಿ ಒಂದಾಗಿದ್ದು, ಚೀನಾದ ಅನೇಕ ಕೆಲಸಗಾರರು ಅಲ್ಲಿ ಕೆಲಸ ಮಾಡುತ್ತಾರೆ. ಹೋಟೆಲ್ ನಲ್ಲಿ ತಂಗಿದ್ದ ಎಲ್ಲಾ ವಿದೇಶಿ ಹಾಗೂ ಸ್ಥಳೀಯ ಅತಿಥಿಗಳನ್ನು ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಬಲೋಚಿಸ್ತಾನ ಮಾಹಿತಿ ಸಚಿವ ಜಹೂರ್ ಬುಲೆದಿ ಹೇಳಿದ್ದಾರೆ ಎಂದು ಎಕ್ಸ್ ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.