ಉಪ್ಪಳ: ಕಲೆ ಎಂಬುದು ಸಂಸ್ಕøತಿಯ ಪ್ರವಾಹಕವಾಗಿದೆ. ಯಾವುದೇ ಕಲೆಗೆ ಅದರದ್ದೇ ಆದ ಮಹತ್ವವಿದ್ದು,ಕಲೆಯನ್ನು ಪೋಷಿಸಿ ರಕ್ಷಿಸುವ ಕಾರ್ಯ ನಮ್ಮಿಂದಾಗಬೇಕಿದೆ ಎಂದು ಆವಳಮಠ ದೇವಸ್ಥಾನದ ಪ್ರಭಾರಿ ಮೊಕ್ತೇಸರ ಗಣಪತಿ ಭಟ್ ಹೇಳಿದರು.
ಬಾಯಾರುಪದವು ಸಮೀಪದ ಆವಳಮಠ ದುರ್ಗಾಸದನದಲ್ಲಿ ಭಾನುವಾರ ನಡೆದ ಶ್ರೀ ದುರ್ಗಾ ಸಪ್ತಸ್ವರ ಸಿಂಗಾರಿ ಮೇಳದ ಪಾದಾರ್ಪಣಾ ಕಾರ್ಯಕ್ರಮದ ಪೂರ್ವಭಾವಿಯಾಗಿ ನಡೆದ ಸಭಾ ಕಾರ್ಯಕ್ರಮ ಮತ್ತು ಕಲಾ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿ ಅವರು ಮಾತನಾಡಿದರು.
ಎಳೆ ವಯಸ್ಸಿನಲ್ಲೇ ಕಲೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡಲ್ಲಿ ಕಲೆಗಳು ಪ್ರಬುದ್ಧವಾಗಿ ಬೆಳೆಯುತ್ತವೆ. ಕಳೆದ ನಾಲ್ಕು ತಿಂಗಳುಗಳಿಂದ ದೇವಸ್ಥಾನದ ಪರಿಸರದಲ್ಲಿ ಕೇರಳ ಚೆಂಡೆಯನ್ನು ಅಭ್ಯಸಿಸಿ,ಹಲವು ಆಯಾಮಗಳಲ್ಲಿ ಪಳಗಿದ ವಿದ್ಯಾರ್ಥಿಗಳು ಸಹಿತ ತರಬೇತುದಾರ ಶ್ರಮವನ್ನು ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ರಿಸರ್ವ್ ಬ್ಯಾಂಕಿನ ವಿಶ್ರಾಂತ ಸಹಾಯಕ ವ್ಯವಸ್ಥಾಪಕ ಲಕ್ಷ್ಮೀನಾರಾಯಣ ಭಟ್ ಮಾತನಾಡಿ ಸತತ ಪ್ರೋತ್ಸಾಹ ಮತ್ತು ಪರಿಶ್ರಮದ ಮೂಲಕ ಒಂದು ಕಲೆಯನ್ನು ಗುರುವಿನ ಮುಖಾಂತರ ತಮ್ಮದಾಗಿಸಿಕೊಂಡಿರುವ ಎಲ್ಲರಿಗೂ ಶುಭಹಾರೈಸಿದರು. ವಿಭಿನ್ನ ಮತ್ತು ಅಪರೂಪದ ಕಲೆಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ, ಇದನ್ನು ಸಾಕ್ಷಾತ್ಕರಿಸಲು ಸಾಧ್ಯವಾಗಬೇಕಿದೆ ಎಂದರು. ಸಿಂಗಾರಿ ಮೇಳದ ಮುಖ್ಯ ತರಬೇತುದಾರ ರಾಜೇಶ್ ಪಾಂಡಿ, ಯಕ್ಷಗಾನ ಹಿಮ್ಮೇಳ ಕಲಾವಿದ ಶೇಣಿ ಸುಬ್ರಹ್ಮಣ್ಯ ಭಟ್, ಪಾರಂಪರಿಕ ಕೊಂಬು ವಾದಕ ಲಕ್ಷ್ಮಣ ಆವಳ ಸಾಗು ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸನ್ಮಾನಿಸಲ್ಪಟ್ಟ ಸಿಂಗಾರಿ ಮೇಳದ ಮುಖ್ಯ ತರಬೇತುದಾರ ರಾಜೇಶ್ ಪಾಂಡಿ ಮಾತನಾಡಿ ಕೇರಳದ ಹಲವು ಸಾಂಸ್ಕøತಿಕ ಹಾಗೂ ಜನಪದ ಕಲೆಗಳು ಇಂದು ವಿಶ್ವವಿಖ್ಯಾತಿ ಹೊಂದಿವೆ. ಇಂತಹ ಕಲೆಗಳಲ್ಲಿ ಒಂದು ಸಿಂಗಾರಿ ಮೇಳವಾಗಿದ್ದು ಹಲವು ರಾಜ್ಯಗಳು ಸಹಿತ ಹೊರದೇಶಗಳಲ್ಲಿ ಸಿಂಗಾರಿ ಮೇಳಗಳು ಸದ್ದುಮಾಡಿವೆ ಎಂದರು. ಶರೀರಕ್ಕೆ ಉತ್ತಮ ವ್ಯಾಯಾಮ ಸಹಿತ ಮನಸ್ಸಿಗೆ ಮುದ ನೀಡುವ ಸಿಂಗಾರಿ ಮೇಳದ ಚೆಂಡೆ ವಾದನವು ಹೊಸತನದ ಮೂಲಕ ಜನರ ಮನಸ್ಸನ್ನು ಗೆದ್ದಿದೆ ಎಂದರು. ಸುಮಾರು 25 ವರ್ಷಗಳ ಹಿಂದೆ ಆರಂಭಗೊಂಡ ಸಿಂಗಾರಿ ಮೇಳವು ತಮಿಳುನಾಡಿನ ನೆಯ್ಯಾಂಡಿ ಮೇಳದಿಂದ ಪ್ರಭಾವಿತವಾಗಿದೆ. ವಿಜಯನ್ ಮಾರಾರ್ ಅವರು ಎರ್ನಾಕುಳಂನ ಪರವೂರಿನಲ್ಲಿ ಮೊತ್ತಮೊದಲಿಗೆ ಆರಂಭಿಸಿದ ಸಿಂಗಾರಿ ಮೇಳ ಪ್ರದರ್ಶನಗಳು ಸಮಾನತೆಯ ಅಂಶವನ್ನು ಸಾರುತ್ತವೆ ಎಂದವರು ತಿಳಿಸಿದರು.
ಈ ಸಂದರ್ಭ ಸಿಂಗಾರಿ ಮೇಳ ಸಹ ತರಬೇತುದಾರರಾದ ಶರತ್,ಮನೋಜ್, ಸುನೀಶ್, ಅನಿಲ್ ಅವರನ್ನು ಗೌರವಿಸಲಾಯಿತು. ಸನ್ಮಾನಿತ ಶೇಣಿ ಸುಬ್ರಹ್ಮಣ್ಯ ಭಟ್ ತಮ್ಮ ಯಕ್ಷಗಾನ ಕಲಾ ಜೀವನದ ಬಗ್ಗೆ ಮಾತನಾಡಿದರು. ಚೆಂಡೆ ಮೇಳದ ವಿದ್ಯಾರ್ಥಿಗಳಾದ ಸಿದ್ದಾರ್ಥ್, ರೂಪಾ, ಚಂದ್ರಿಕಾ ತಮ್ಮ ಅನುಭವವನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಬಾಯಾರು ಸೇವಾ ಸಹಕಾರಿ ಬ್ಯಾಂಕಿನ ನಿವೃತ್ತ ಕಾರ್ಯದರ್ಶಿ ಸದಾನಂದ.ಎಂ ಅತಿಥಿಯಾಗಿನ ಉಪಸ್ಥಿತರಿದ್ದರು. ಪೈವಳಿಕೆ ಗ್ರಾ.ಪಂ ಸದಸ್ಯ ಆಟಿಕುಕ್ಕೆ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದ್ದರು. ಶ್ರೀರಾಮ ಮಾಸ್ತರ್ ಆವಳ ಕೆದುಕೋಡಿ ಸ್ವಾಗತಿಸಿ, ಶ್ರೀ ದುರ್ಗಾ ಸಪ್ತಸ್ವರ ಸಿಂಗಾರಿ ಮೇಳದ ಸಂಚಾಲಕ ಗಣೇಶ್ ಪ್ರಸಾದ ಸುದೆಂಬಳ ವಂದಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನೆ ಹಾಡಲಾಯಿತು, ಕಾರ್ಯಕ್ರಮದ ಕೊನೆಯಲ್ಲಿ ಲಕ್ಕಿಡಿಪ್ ಡ್ರಾ ನಡೆಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ದೇವಳದ ಆವರಣದಲ್ಲಿ ಗುರುದಕ್ಷಿಣೆ ನೀಡುವ ಕಾರ್ಯಕ್ರಮ ಹಾಗೂ ಪ್ರಸಾದ ಸ್ವೀಕರಿಸಿ ಸಿಂಗಾರಿ ಮೇಳದ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.