ನವದೆಹಲಿ: ವಿದೇಶೀ ದೇಣಿಗೆ ಪಡೆಯುವ ನಿಯಮ ಉಲ್ಲಂಘನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರು ಮೂಲದ ಎನ್ಜಿಒ ಇನ್ಫೋಸಿಸ್ ಫೌಂಡೇಷನ್ ನೋಂದಣಿಯನ್ನು ಗೃಹ ಸಚಿವಾಲಯ ರದ್ದುಪಡಿಸಿದೆ.
ಎಲ್ಲಾ ಸರ್ಕಾರೇತರ ಸಂಘಟನೆಗಳು (ಎನ್ಜಿಒಗಳು) ವಿದೇಶಿ ದೇಣಿಗೆ ಪಡೆದುಕೊಳ್ಲಲು ವಿದೇಶಿ ದೇಣಿಗೆ (ನಿಯಂತ್ರಣ) ಕಾಯಿದೆ ಅಥವಾ ಎಫ್‍ಸಿಆರ್‍ಎ ಅಡಿಯಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ.
ಕಳೆದ ವರ್ಷ ಗೃಹ ಸಚಿವಾಲಯ ಇನ್ಫೊಸಿಸ್ ಫೌಂಡೇಷನ್ ಗೆ ವಾರ್ಷಿಕ ಆದಾಯ-ವೆಚ್ಚಗಳ ಕುರಿತ ಮಾಹಿತಿ ಒದಗಿಸಲು ಕೇಳಿತ್ತು. ಕಳೆದ ಆರು ವರ್ಷಗಳ ಲೆಕ್ಕ ಸಲ್ಲಿಸಲು ಸಚಿವಾಲಯ ಮಾಡಿದ್ದ ಮನವಿ ಪೂರೈಸಲು ಫೌಂಡೇಷನ್ ವಿಫಲವಾಗಿರುವ ಹಿನ್ನೆಲೆಯಲ್ಲಿ ಶೋಕಾಸ್ ನೊಟೀಸ್ ನಿಡಲಾಗಿತ್ತು. ಆದರೂ ಸಂಸ್ಥೆ ಸೂಕ್ತ ಲೆಕ್ಕಪತ್ರ ನೀಡಿರಲಿಲ್ಲ.
ಎಫ್‍ಸಿಆರ್‍ಎ ನಿಯಮಾನುಸಾರ ಎನ್ಜಿಒ ಸಂಸ್ಥೆ ಲೆಕ್ಕಪತ್ರವನ್ನು ಆನ್ ಲೈನ್ ಮೂಲಕ ಸಲ್ಲಿಸಬೇಕಾಗುತ್ತದೆ. ಖರ್ಚುಗಳ ವಿವರ ಮತ್ತು ಆದಾಯದ ಮಾಹಿತಿಯನ್ನು ಸ್ಕ್ಯಾನ್ ಮಾಡಿ ಹಣಕಾಸು ವರ್ಷ ಆರಂಭಗೊಂಡ 9 ತಿಂಗಳ ಒಳಗಡೆ ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ಸಂಸ್ಥೆ ಆ ವರ್ಷ ಯಾವ ವಿದೇಶೀ ದೇಣಿಗೆ ಪಡೆಯದಿದರೂ "ತಾವು ಯಾವ ದೇಣಿಗೆ ಪಡೆದಿಲ್ಲ" ಎಂದು ಉಲ್ಲೇಖಿಸಿ ಮಾಹಿತಿ ನೀಡಲೇಬೇಕಿದೆ.
ಇನ್ನು ಫೌಂಡೇಷನ್ ನೊಂದಣಿಯನ್ನು ರದ್ದು ಮಾಡಿರುವ ಕುರಿತು ಸಂಸ್ಥೆಯನ್ನು ಪತ್ರಿಕೆ ಸಂಪರ್ಕಿಸಿದಾಗ ನಮ್ಮ ಸಂಸ್ಥೆ ಎಫ್‍ಸಿಆರ್‍ಎ ನಿಯಮಗಳಡಿ ಬರುವುದಿಲ್ಲ ಎಂಬ ಉತ್ತರ ಬಂದಿದೆ."2016 ರಲ್ಲಿ ಕಾಯ್ದೆಗೆ ಮಾಡಲಾದ ತಿದ್ದುಪಡಿ ನಂತರ ರ ಇನ್ಫೋಸಿಸ್ ಫೌಂಡೇಶನ್ ಎಫ್‍ಸಿಆರ್‍ಎ ವ್ಯಾಪ್ತಿಯೊಳಗೆ ಬರುವುದಿಲ್ಲ. ಹಾಗಾಗಿ ನಾವು ನೊಂದಣಿ ರದ್ದತಿಗೆ ಮನವಿ ಮಾಡಿದ್ದು ಸಚಿವಾಲಯ ನಮ್ಮ ಮನವಿಯನ್ನು ಪುರಸ್ಕರೈಸಿದ್ದಕ್ಕಾಗಿ ಣಾವು ಧನ್ಯವಾದ ಹೇಳುತ್ತೇವೆ"ಫೌಂಡೇಷನ್ ನ ಸಾಂಸ್ಥಿಕ ವ್ಯಾಪಾರೋದ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ರಿಷಿ ಬಸು ಹೇಳಿದ್ದಾರೆ.
1996 ರಲ್ಲಿ ಸ್ಥಾಪನೆಗೊಂಡ ಇನ್ಫೋಸಿಸ್ ಫೌಂಡೇಷನ್ ಶಿಕ್ಷಣ, ಗ್ರಾಮೀಣ ಅಭಿವೃದ್ಧಿ, ಆರೋಗ್ಯ ರಕ್ಷಣೆ, ಕಲೆ ಮತ್ತು ಸಂಸ್ಕೃತಿ, ಮತ್ತು ಅನಾಥ ಮಕ್ಕಳ ಆರೈಕೆಗಾಗಿ ನೆರವು ನೀಡುತ್ತದೆ.ಖ್ಯಾತ ಸಾಫ್ಟ್ ವೇರ್ ಉದ್ಯಮಿ ನಾರಾಯಣ ಮೂರ್ತಿ ಪತ್ನಿ ಸುಧಾ ಮೂರ್ತಿ ಈ ಫೌಂಡೇಷನ್ ನ ಅಧ್ಯಕ್ಷೆಯಾಗಿದ್ದಾರೆ.