ಇಗ್ಲೆಂಡ್: ಐಸಿಸಿ ವಿಶ್ಚಕಪ್ ಕ್ರಿಕೆಟ್ ಕೂಟಕ್ಕೆ ದಿನಗಣನೆ ಪ್ರಾರಂಭವಾಗಿದೆ. ನಮ್ಮಲ್ಲಿ ಐ.ಪಿ.ಎಲ್. ಹವಾ ಮುಕ್ತಾಯಗೊಳ್ಳುತ್ತಿದ್ದಂತೆ ಕ್ರಿಕೆಟ್ ಪ್ರೇಮಿಗಳು ಆಂಗ್ಲರ ನಾಡಿನಲ್ಲಿ ನಡೆಯುವ ವಿಶ್ವಕಪ್ ಹಣಾಹಣಿಯತ್ತ ಕುತೂಹಲದ ಕಣ್ಣು ನೆಟ್ಟಿದ್ದಾರೆ.
ಆತಿಥೇಯ ಇಂಗ್ಲಂಡ್, ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ಭಾರತ, ಪಾಕಿಸ್ಥಾನ, ನ್ಯೂಝಿಲ್ಯಾಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ಥಾನ ಈ ಬಾರಿಯ ವಿಶ್ವಕಪ್ ಸಮರದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಒಡ್ಡಲಿದೆ.
ರೌಂಡ್ ರಾಬಿನ್ ಹಂತದಲ್ಲಿ ಎಲ್ಲಾ ಹತ್ತು ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಇವುಗಳಲ್ಲಿ ಮೊದಲ ನಾಲ್ಕು ಸ್ಥಾನವನ್ನು ಸಂಪಾದಿಸುವ ತಂಡಗಳು ನೇರವಾಗಿ ಸೆಮಿಫೈನಲ್ ನಲ್ಲಿ ಸೆಣೆಸಲಿರುವುದು ಈ ಬಾರಿಯ ವಿಶೇಷ. 1992ರ ಬಳಿಕ ವಿಶ್ವಕಪ್ ಕೂಟವೊಂದರಲ್ಲಿ ಎಲ್ಲಾ ತಂಡಗಳು ಲೀಗ್ ಹಂತದಲ್ಲಿ ಪರಸ್ಪರ ಮುಖಾಮುಖಿಯಾಗುತ್ತಿರುವುದು ಈ ಬಾರಿಯ ವಿಶೇಷವಾಗಿರಲಿದೆ.
ಇಂಗ್ಲಂಡ್ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸುವ ಮೂಲಕ ವಿಶ್ವಕಪ್ ಕೂಟಕ್ಕೆ ಮೇ 30ರಂದು ಅಧಿಕೃತ ಚಾಲನೆ ದೊರಕಲಿದೆ. ಇನ್ನು ಭಾರತ ತಂಡವು ಜೂನ್ 5ರಂದು ದಕ್ಷಿಣ ಆಫ್ರಿಕಾವನ್ನು ಎದುರಿಸುವ ಮೂಲಕ ತನ್ನ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ.
ರೌಂಡ್ ರಾಬಿನ್ ಲೀಗ್ ನಲ್ಲಿ ಒಟ್ಟು 43 ಪಂದ್ಯಗಳು ನಡೆಯಲಿವೆ. ಬಳಿಕ ಅಗ್ರ ನಾಲ್ಕು ತಂಡಗಳು ಸೆಮಿಫೈನಲ್ ಪಂದ್ಯದಲ್ಲಿ ಸೆಣೆಸಿದರೆ ಅಲ್ಲಿ ವಿಜಯಿಯಾಗುವ 2 ತಂಡಗಳು ಕ್ರಿಕೆಟ್ ಜಗತ್ತಿನ ಸಾಮ್ರಾಟನಾಗಲು ಫೈನಲ್ ಕದನದಲ್ಲಿ ಮುಖಾಮುಖಿಯಾಗಲಿವೆ.
ಟೀಂ ಇಂಡಿಯಾ ಜೂನ್ 5ರಂದು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಬಳಿಕ ಜೂನ್ 09ಕ್ಕೆ ಹಾಲಿ ವಿಶ್ವ ಚಾಂಪಿಯನ್ ಆಸೀಸ್ ಜೊತೆ ಕೊಹ್ಲಿ ಪಡೆ ಸೆಣೆಸಲಿದೆ. ಬಳಿಕ ಭಾರತ ಮುಖಾಮುಖಿಯಾಗಲಿರುವುದು ನ್ಯೂಝಿಲ್ಯಾಂಡ್ ತಂಡದ ಜೊತೆ ಅದು ಜೂನ್ 13ರಂದು. ಇನ್ನು ಭಾರತ ಪಾಕಿಸ್ಥಾನ ಹೈವೋಲ್ಟೇಜ್ ಪಂದ್ಯ ಜೂನ್ 16ರಂದು ನಡೆಯಲಿದೆ. ಆ ಬಳಿಕ ಜೂನ್ 22ರಂದು ಭಾರತ ಅಫ್ಗಾನಿಸ್ಥಾನ ಮುಖಾಮುಖಿಯಾಗಲಿದೆ. ಭಾರತ ಜೂನ್ 27ರಂದು ವೆಸ್ಟ್ ಇಂಡೀಸನ್ನು ಎದುರಿಸಲಿದೆ ಮತ್ತು ಜೂನ್ 30 ರಂದು ಭಾರತ ಇಂಗ್ಲಂಡ್ ಮುಖಾಮುಖಿಯಾಗಲಿವೆ. ಬಾಂಗ್ಲಾದೇಶ ಭಾರತ ನಡುವಿನ ರೋಮಾಂಚಕ ಪಂದ್ಯ ಜುಲೈ 2ರಂದು ನಡೆಯಲಿದೆ. ಜುಲೈ 06ರಂದು ಶ್ರೀಲಂಕಾವನ್ನು ಎದುರಿಸುವ ಮೂಲಕ ಭಾರತ ತನ್ನ ಲೀಗ್ ಪಂದ್ಯಾಟಗಳನ್ನು ಕೊನೆಗೊಳಿಸಲಿದೆ.
ಐಸಿಸಿ ವಿಶ್ವಕಪ್ 2019ರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ…: