ಲಖನೌ: ಲೋಕಸಭಾ ಚುನಾವಣೆ ಪ್ರಚಾರದಲ್ಲಿ ನಿರತರಾಗಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಶುಕ್ರವಾರ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದು, ಹಿಮಾಚಲ ಪ್ರದೇಶದ ಊನದಲ್ಲಿ ತಮ್ಮ ಹೆಲಿಕಾಪ್ಟರ್?ಅನ್ನು ತಾವೇ ರಿಪೇರಿ ಮಾಡುತ್ತಿರುವ ದೃಶ್ಯ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ಮೊನ್ನೆ ರಾಹುಲ್ ಗಾಂಧಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಈ ವೇಳೆ ರಾಹುಲ್? ಗಾಂಧಿ ಮತ್ತು ಅವರ ಜೊತೆಗೆ ಇದ್ದವರೆಲ್ಲಾ ಹೆಲಿಕಾಪ್ಟರ್ ರಿಪೇರಿ ಮಾಡಲು ಸಹಾಯ ಮಾಡಿದ್ದಾರೆ.
ರಾಹುಲ್ ಗಾಂಧಿ ಅವರು ತಾವು ರಿಪೇರಿ ಕೆಲಸದಲ್ಲಿ ನಿರತರಾಗಿರುವ ಫೋಟೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಾಕಿದ್ದು, ಅದಕ್ಕೆ "ಉತ್ತಮ ಒಗ್ಗಟ್ಟಿನ ಕೆಲಸದ ಮೂಲಕ ಸಮಸ್ಯೆ ಸರಿಪಡಿಸಲಾಗಿದೆ," ಎಂದು ಶೀರ್ಷಿಕೆ ನೀಡಿದ್ದಾರೆ.
"ಒಗ್ಗಟ್ಟಿನ ಕೆಲಸ ಅಂದರೆ ಡೆಕ್ ನಲ್ಲಿ ಇದ್ದವರೆಲ್ಲರೂ ಕೈ ಜೋಡಿಸಿ, ಹೆಲಿಕಾಪ್ಟರ್ ನಲ್ಲಿ ಕಾಣಿಸಿಕೊಂಡ ಸಮಸ್ಯೆಯನ್ನು ಬಗೆಹರಿಸಿದ್ದೇವೆ. ಒಗ್ಗಟಿನಿಂದ ಕೆಲಸ ಮಾಡಿದರೆ ಶೀಘ್ರದಲ್ಲಿ ಎಲ್ಲ ಸಮಸ್ಯೆ ಪರಿಹಾರ ಆಗಲಿವೆ. ಗಂಭೀರವಾದ ಸಮಸ್ಯೆ ಏನಿಲ್ಲ, ಧನ್ಯವಾದಗಳು," ಎಂದು ರಾಹುಲ್ ಗಾಂಧಿ ಬರೆದುಕೊಂಡಿದ್ದಾರೆ.