ಕಾಸರಗೋಡು: ಕಳೆದ ಫೆಬ್ರವರಿ ತಿಂಗಳಲ್ಲಿ ಎಲ್.ಬಿ.ಎಸ್ ಸಂಸ್ಥೆಯ ಮೂಲಕ ಕೇರಳ ಹೈಯರ್ ಸೆಕೆಂಡರಿ ನಿರ್ದೇಶನಾಲಯವು ಕನ್ನಡ ಸ್ನಾತಕಕೋತ್ತರ ಪದವೀಧರರಿಗೆ ನಡೆಸಿದ ಸೆಟ್ (ಸ್ಟೇಟ್ ಎಲಿಜಿಬಿಲಿಟಿ ಟೆಸ್ಟ್) ಪರೀಕ್ಷೆಯಲ್ಲಿ ಕನ್ನಡ ವಿಷಯವನ್ನು ಕೈಬಿಟ್ಟಿತ್ತು. ಇದರ ಬಗ್ಗೆ ಕಾಸರಗೋಡಿನ ಸಿರಿಚಂದನ ಕನ್ನಡ ಯುವಬಳಗವು ಅಧಿಕೃತರನ್ನು ಮನವಿಯ ಮೂಲಕ ಪ್ರಶ್ನಿಸಿತ್ತು. ಬಳಗದ ಪ್ರಶ್ನೆಗಳಿಗೆ ಉತ್ತರಿಸಿದ ನಿರ್ದೇಶನಾಲಯವು ತನ್ನದೇ ಆದ ಸಮರ್ಥನೆಯನ್ನು ನೀಡಿದ್ದು, ಇದು ಇಲಾಖೆಯ ಕನ್ನಡದ ಅವಗಣನೆಗೆ ಸಾಕ್ಷಿಯಾಗಿದೆ.
ನಿರ್ದೇಶನಾಲಯವು ವರ್ಷದಲ್ಲಿ ಎರಡು ಬಾರಿ ಸೆಟ್ ಪರೀಕ್ಷೆ ನಡೆಸಲು ತೀರ್ಮಾನಿಸಿದ್ದು, ಆಂಥ್ರೋಪಾಲಜಿ, ಗಾಂಧೀಯನ್ ಸ್ಟಡೀಸ್, ಇಸ್ಲಾಮಿಕ್ ಹಿಸ್ಟ್ರಿ, ಕನ್ನಡ ಮತ್ತು ತಮಿಳು ವಿಷಯಗಳಿಗೆ ಅರ್ಜಿಗಳ ಸಂಖ್ಯೆ ಕಡಿಮೆಯಾದ ಕಾರಣ ಈ ವಿಷಯಗಳಿಗೆ ವರ್ಷದಲ್ಲಿ ಒಂದು ಬಾರಿ ಮಾತ್ರ ಪರೀಕ್ಷೆ ನಡೆಸಲಾಗುವುದು ಎಂದು ಇಲಾಖೆ ತಿಳಿಸಿದೆ. ಇದರಿಂದಾಗಿ ಇತರ ವಿಷಯಗಳ ಅಭ್ಯರ್ಥಿಗಳಿಗೆ ಲಭಿಸುವ ಸೌಲಭ್ಯಗಳಿಗಿಂತ ಕನ್ನಡ ಪದವೀಧರರು ಅವಕಾಶ ವಂಚಿತರಾಗುವಂತಾಗಿದೆ. ಕನ್ನಡ ವಿದ್ಯಾರ್ಥಿಗಳು ಉದ್ಯೋಗಾರ್ಥಿಗಳು ಇಂತಹ ಸಮಸ್ಯೆಗಳು ಬರುವಾಗ ತಕ್ಷಣ ಇದನ್ನು ಸರಿಪಡಿಸುವತ್ತ ಒಟ್ಟಾಗಿ ದುಡಿಯಬೇಕಾಗಿದೆ ಎಂದು ಸಿರಿಚಂದನ ಕನ್ನಡ ಯುವಬಳಗ ಕಾಸರಗೋಡು ಸಂಸ್ಥೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.