ಉಪ್ಪಳ: ಬಾಯಾರು ಪೆರ್ವೊಡಿಯ ಶ್ರೀವಿವೇಕಾನಂದ ಸಾಂಸ್ಕøತಿಕ ಕೇಂದ್ರದ ನೇತೃತ್ವದಲ್ಲಿ ಸ್ವ ಸಹಾಯ ಸಂಘಗಳು ಬಾಯಾರು-ಪೆರ್ವೊಡಿ ಹಾಗೂ ಗ್ರಾಮ ವಿಕಾಸ ಯೋಜನೆ ಇದರ ಸಹಭಾಗಿತ್ವದಲ್ಲಿ ಪುಸ್ತಕ ಪೂಜೆ ಹಾಗೂ ಬಾಲಗೋಕುಲದ ಮಕ್ಕಳಿಗೆ ಕಲಿಕೋಪಕರಣಗಳ ವಿತರಣಾ ಸಮಾರಂಭ ಪೆರ್ವೊಡಿ ವಿವೇಕಾನಂದ ಮೈದಾನದಲ್ಲಿ ಭಾನುವಾರ ನಡೆಯಿತು.
ಸಮಾರಂಭವನ್ನು ಉದ್ಘಾಟಿಸಿದ ಕರ್ನಾಟಕ ಬ್ಯಾಂಕ್ ಮಾಣಿಲ ಶಾಖಾ ಪ್ರಬಂಧಕ ಆಲ್ಚಾರ್ ಉಮೇಶ ನಾಯಕ್ ಅವರು ಮಾತನಾಡಿ, ಪುಸ್ತಕ ವಿತರಣಾ ಕಾರ್ಯಕ್ರಮದಂತಹ ಸೇವಾಚಟುವಟಿಕೆಗಳು ಮಕ್ಕಳಿಗೆ ಕೇವಲ ಕಲಿಕೋಪಕರಣಗಳ ವಿತರಣೆ, ಮಕ್ಕಳು ಪಡೆದುಕೊಳ್ಳುವಲ್ಲಿಗೆ ಮುಕ್ತಾಯವಲ್ಲ, ಬದಲಾಗಿ ಇದರ ಪ್ರಯೋಜನ ಪಡೆದ ಮಕ್ಕಳು ವಿದ್ಯಾವಂತರಾಗಿ ಉತ್ತಮ ಸಮಾಜ ನಿರ್ಮಾಣ ಮಾಡುವಂತಾಗಬೇಕು. ಇದರ ಪ್ರಯೋಜನ ಪಡೆದು ಉತ್ತಮ ಜೀವನ ರೂಪೀಕರಿಸಿದ ಮಕ್ಕಳು ಇಂತಹ ಸಂಘ ಸಂಸ್ಥೆಗಳ ಉತ್ತಮ ಕಾರ್ಯವನ್ನು ಸದಾ ಸ್ಮರಿಸಿ ಮುಂದಿನ ದಿನಗಳಲ್ಲಿ ಇಂತಹ ಸಮಾಜಮುಖಿ ಕೆಲಸವನ್ನು ಮಾಡುವ ಮನೋಭಾವ ಬೆಳೆಸಿಕೊಳ್ಳುವಂತಾಗಬೇಕು ಎಂದರು. ಎಲ್ಲಾ ಸಂಘ ಸಂಸ್ಥೆಗಳು ಕೇವಲ ಮನೋರಂಜನೆಗೋಸ್ಕರ ಕಾರ್ಯಕ್ರಮ ಮಾಡುವ ಬದಲು ಇಂತಹ ಸೇವಾಕಾರ್ಯಗಳನ್ನು ಮಾಡುವಂತಾಗಬೇಕು. ಸೇವಾಕಾರ್ಯಗಳಿಗೆ ಸಮಾಜವು ಉತ್ತಮ ಸ್ಪಂದನೆ ನೀಡುತ್ತದೆ ಎಂದು ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಗ್ರಾಮ ವಿಕಾಸ ಪ್ರಮುಖ್ ಪ್ರವೀಣ ಸರಳಾಯ ಅವರು ಮಾತನಾಡಿ ಬಾಲಗೋಕುಲಗಳು ಮಕ್ಕಳ ಜ್ಞಾನಾರ್ಜನೆಗೆ ಹಾಗೂ ಭಾರತೀಯ ಸಂಸ್ಕೃತಿಯ ಬೆಳೆಸುವ ಕೆಲಸ ಮಾಡುತ್ತಿವೆ. ಜ್ಞಾನ ಹಾಗೂ ಸಂಸ್ಕಾರದ ಜೊತೆಯಲ್ಲಿ ವಿದ್ಯಾಭ್ಯಾಸವೂ ಕೂಡ ಪ್ರಾಮುಖ್ಯತೆ ಹೊಂದಿದೆ. ಮಕ್ಕಳಿಗೆ ಕಲಿಕೋಪಕರಣಗಳ ವಿತರಣೆ ಉತ್ತಮ ಕಲಿಕೆಗೆ ಪೂರಕವಾಗಿದೆ. ಈ ಸಂಸ್ಥೆಯು ನಡೆಸಿದ ಸೇವೆ ಅನುಕರಣೀಯವಾಗಿದೆ ಹಾಗೂ ಇಂತಹ ಉತ್ತಮ ಸೇವಾ ಕಾರ್ಯಗಳು ಪ್ರತಿ ಗ್ರಾಮಗಳಲ್ಲೂ ನಡೆಯುವಂತಾಗಬೇಕು ಎಂದರು.
ಈ ಸಂದರ್ಭದಲ್ಲಿ ಪೆರ್ವೊಡಿ, ಕೊಜಪ್ಪೆ, ಬೆರಿಪದವು ಹಾಗೂ ಬಳ್ಳೂರು ಇಲ್ಲಿನ ಬಾಲಗೋಕುಲಗಳ 120 ಮಕ್ಕಳಿಗೆ ಪುಸ್ತಕ ಹಾಗೂ ಕಲಿಕೋಪಕರಣಗಳ ವಿತರಣೆ ಮಾಡಲಾಯಿತು. ಗ್ರಾಮ ವಿಕಾಸ ವಿಭಾಗದ ವತಿಯಿಂದ ದಾನಿಗಳಿಂದ ಪಡೆದ ಶಾಲಾ ಬ್ಯಾಗ್ ಗಳನ್ನು ವಿಶೇಷವಾಗಿ ಗುರುತಿಸಲ್ಪಟ್ಟ 20 ಮಂದಿ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸದಾನಂದ ಆಳ್ವ ಪೆರ್ವೆಡಿಬೀಡು ವಹಿಸಿದ್ದರು. ವಿವೇಕಾನಂದ ಸಾಂಸ್ಕøತಿಕ ಕೇಂದ್ರದ ಅಧ್ಯಕ್ಷ ರಾಧಾಕೃಷ್ಣ ರೈ ಉಪಸ್ಥಿತರಿದ್ದರು. ರಾಮ ಮಾಸ್ತರ್ ಸ್ವಾಗತಿಸಿ, ಕೇಶವ ನಾಯಕ್ ವಂದಿಸಿದರು.