ಮುಳ್ಳೇರಿಯ: ಪುಣ್ಯ ಕಾರ್ಯದಲ್ಲಿ ಭಾಗಿಗಳಾದರೆ ನಮಗೆ ಧನ್ಯತೆ ಉಂಟಾಗುತ್ತದೆ. ಸಮಾಜದ ಯಶಸ್ಸಿಗೆ ನಾವು ಕಾರಣರಾಗಬೇಕು. ಈ ಸಮಾಜದಲ್ಲಿ ಎಲ್ಲರೂ ಸುಖಿಗಳಾಗಿ ಬದುಕಬೇಕು. ಅದನ್ನು ಕಂಡು ನಾವು ಹೆಮ್ಮೆಪಡಬೇಕು. ಅಂತರಂಗ ಶುದ್ಧಿ ಬಹಿರಂಗ ಶುದ್ಧಿ ಎಲ್ಲ ಧರ್ಮಗಳ ಸಾರ ಎಂದು ನಿವೃತ್ತ ಪ್ರಾಧ್ಯಾಪಕ, ಆಕಾಶವಾಣಿ ಕಲಾವಿದ ಮಹಾಬಲೇಶ್ವರ ಹೆಬ್ಬಾರ್ ಹೇಳಿದರು.
ಅವರು ಕುಂಡಂಗುಳಿ ಜಾಲುಮನೆ ಕೋಟೆಬಯಲು ವಾಗ್ಮಾನ್ ದೇವರಮನೆಯ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳ ಅಂಗವಾಗಿ ಇತ್ತೀಚೆಗೆ ನಡೆದ ಧಾರ್ಮಿಕ ಸಭೆಯಲ್ಲಿ, ದೀಪ ಪ್ರಜ್ವಲನೆಗೊಳಿಸಿ ಚಾಲನೆ ನೀಡಿ, ಧಾರ್ಮಿಕ ಉಪನ್ಯಾಸಗೈದು ಮಾತನಾಡಿದರು.
ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಆಶೀರ್ವಚನ ನೀಡಿದರು. ಬ್ರಹ್ಮಶ್ರೀ ಇರುವೈಲು ಕೇಶವದಾಸ ತಂತ್ರಿ ಮತ್ತು ಬ್ರಹ್ಮಶ್ರೀ ಇರುವೈಲು ಕೃಷ್ಣದಾಸ ತಂತ್ರಿಗಳು ಉಪಸ್ಥಿತರಿದ್ದು ಅನುಗ್ರಹ ಭಾಷಣ ಮಾಡಿದರು. ವಾಗ್ಮಾನ್ ಸೇವಾ ಸಮಿತಿ ಅಧ್ಯಕ್ಷ ರಾಘವೇಂದ್ರ ರಾವ್ ಹುಣ್ಸೆಡ್ಕ ಅಧ್ಯಕ್ಷತೆ ವಹಿಸಿದ್ದರು. ಗೌರವ ಅತಿಥಿಗಳಾಗಿ ಪುರೋಹಿತ ಈಶ್ವರ ಭಟ್, ಕುಲಗುರು ತಾನೋಜಿ ರಾವ್, ಮಾಧವನ್ ನಾಯರ್ ಕುಂಡಂಗುಳಿ, ವಾಸ್ತುಶಿಲ್ಪಿ ಪುಷ್ಪರಾಜ್, ಬೇಡಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರನ್, ಗ್ರಾಮ ಪಂಚಾಯಿತಿ ಸದಸ್ಯೆ ಕೃಪಾಜ್ಯೋತಿ, ಆರ್ಯಮರಾಠ ಸಮಾಜ ಸಂಘದ ಅಧ್ಯಕ್ಷ ಯತೀಂದ್ರ ರಾವ್, ಕುಂಡಗುಳಿ ಕ್ಷೇತ್ರ ಆಡಳಿತೆ ಸಮಿತಿ ಅಧ್ಯಕ್ಷ ಕೋಡೋತ್ತ್ ವೇಣುಗೋಪಾಲನ್ ನಾಯರ್, ಕೊರಕ್ಕೋಡು ಕ್ಷೇತ್ರ ಆಡಳಿತೆ ಮೊಕ್ತೇಸರ ಬಿ.ಪುರುಷೋತ್ತಮ ರಾವ್ ಧರೇಕರ್, ಹಿತ್ಲುಗದ್ದೆ ವಾಗ್ಮಾನ್ ದೇವರಮನೆಯ ಗಿರಿಧರ ರಾವ್, ಮಾವಿನಹಿತ್ಲು ಚಂದ್ರಮಾನ್ ದೇವರಮನೆಯ ದಾಕೋಜಿ ರಾವ್, ಚೊಟ್ಟೆ ಲಾಡ್ ದೇವರ ಮನೆಯ ಹರೀಶ ಎಂ ರಾವ್ ಲಾಡ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಾಸ್ತು ಶಿಲ್ಪಿ ಪುಷ್ಪರಾಜ್ ಆಚಾರ್ಯ ಮತ್ತು ವಾಗ್ಮಾನ್ ಮನೆತನದ ಹಿರಿಯರನ್ನು ಸನ್ಮಾನಿಸಲಾಯಿತು.
ಬ್ರಹ್ಮಕಲಶೋತ್ಸವ ಸಮಿತಿಯ ಗಿರೀಶ್ ರಾವ್ ವಾಗ್ಮಾನ್ ಸ್ವಾಗತಿಸಿ, ಸುಧಾಕರ ಮತ್ತು ಚರಣ್ ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಾಮೋಜಿ ರಾವ್ ವಾಗ್ಮಾನ್ ವಂದಿಸಿದರು.