ನವದೆಹಲಿ: ಹಾಲಿ ಲೋಕಸಭಾ ಚುನಾವಣೆ ಮುಕ್ತಾಯಕ್ಕೆ ಇನ್ನೂ 2 ಹಂತದ ಮತದಾನ ಪ್ರಕ್ರಿಯೆ ಬಾಕಿ ಇದ್ದು ಅದಾಗಲೇ ವಿಪಕ್ಷಗಳು ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಶತಾಯಗತಾಯ ಅಧಿಕಾರದಿಂದ ಕೆಳಗಿಳಿಸಲು ಯೋಜನೆ ರೂಪಿಸಿವೆ ಎನ್ನಲಾಗುತ್ತಿದೆ.
ಈ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದ್ದು, ವರದಿಯಲ್ಲಿರುವಂತೆ ಹಾಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಅಧಿಕಾರಕ್ಕೇರದಂತೆ ತಡೆಯಲು ವಿಪಕ್ಷಗಳು ಮಾಸ್ಟರ್ ಪ್ಲಾನ್ ರೂಪಿಸಿವೆ ಎನ್ನಲಾಗಿದೆ.
ಹಾಲಿ ಲೋಕಸಭಾ ಚುನಾವಣೆಯಲ್ಲಿ ಪ್ರಸ್ತುತ 5 ಹಂತಗಳ ಮತದಾನ ಪೂರ್ಣಗೊಂಡಿದ್ದು ಇನ್ನು 2 ಹಂತದ ಮತದಾನ ಬಾಕಿ ಇದೆ. ಹೀಗಿರುವಾಗಲೇ ವಿಪಕ್ಷಗಳು ಅಂತಿಮ ಹಂತದ ಮತದಾನ ಮುಕ್ತಾಯವಾಗುತ್ತಿದ್ದಂತೆಯೇ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದು, ಭೇಟಿ ವೇಳೆ ಪೂರ್ಣ ಬಹುಮತವಿರದ ಹೊರತು ಸರ್ಕಾರ ರಚನೆಗೆ ಆಹ್ವಾನ ನೀಡಬಾರದು ಎಂದು ಮನವಿ ಮಾಡಿಕೊಳ್ಳಲಿವೆ. ಪ್ರಸ್ತುತ ಲಭ್ಯವಾಗಿರುವ ಬಹುತೇಕ ಎಲ್ಲ ಚುನಾವಣಾ ಪೂರ್ವ ಸಮೀಕ್ಷೆಗಳು ಬಿಜೆಪಿ ಸಂಪೂರ್ಣ ಬಹುಮತ ಸಿಗುವುದಿಲ್ಲ. ಸರ್ಕಾರ ರಚನೆಗಾಗಿ ಮೈತ್ರಿ ಪಕ್ಷಗಳ ಬೆಂಬಲ ಅಗತ್ಯ ಎಂದು ಹೇಳಿವೆ.
ಇದೇ ಕಾರಣಕ್ಕೆ ವಿಪಕ್ಷಗಳು ಏಕೈಕ ದೊಡ್ಡ ಪಕ್ಷ ಎಂಬ ಕಾರಣಕ್ಕೇ ಸರ್ಕಾರ ರಚನೆಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಲು ಮುಂದಾಗಿವೆ ಎನ್ನಲಾಗಿದೆ. ಅಲ್ಲದೆ ಇದಕ್ಕಾಗಿ ಕರ್ನಾಟಕದ ಉದಾಹರಣೆ ನೀಡಲು ವಿಪಕ್ಷಗಳು ಚಿಂತಿಸಿದ್ದು, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿದ್ದರೂ ಸರ್ಕಾರ ರಚನೆ ಮಾಡಿಲ್ಲ. ಅಲ್ಲದೆ ಗೋವಾ ಮತ್ತು ಮಣಿಪುರದಲ್ಲೂ ಇಂತಹುದೇ ಪರಿಸ್ಥಿತಿ ಇದ್ದು, ಈ ಅಂಶಗಳನ್ನೇ ಮುಂದಿಟ್ಟುಕೊಂಡು ವಿಪಕ್ಷಗಳು ರಾಷ್ಟ್ರಪತಿಗಳಿಗೆ ಮನವಿ ಮಾಡಲಿವೆ ಎನ್ನಲಾಗಿದೆ.
ಇದಕ್ಕಾಗಿ ಎಲ್ಲ 21 ವಿರೋಧ ಪಕ್ಷಗಳು ಸಹಿ ಹಾಕಿದ ಪತ್ರಗಳನ್ನು ರಾಷ್ಟ್ರಪತಿಗಳಿಗೆ ನೀಡಲಿವೆ ಎನ್ನಲಾಗಿದೆ. ಅಲ್ಲದೆ ಫಲಿತಾಂಶ ಪೂರ್ಣಗೊಂಡ ಬಳಿಕ ಬಹುಮತದೊಂದಿಗೆ ತಮ್ಮ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯನ್ನು ಸೂಚಿಸುವುದಾಗಿಯೂ ವಿಪಕ್ಷಗಳು ಹೇಳಿವೆ.
ವಿಪಕ್ಷಗಳ ಈ ನಿಲುವಿಗೆ ಆಪರೇಷನ್ ಕಮಲ ಭೀತಿ ಕಾರಣ?
ವಿಪಕ್ಷಗಳ ಈ ಅಚ್ಚರಿ ನಡೆಗೆ ಆ ಪಕ್ಷಗಳಲ್ಲಿನ ಭಯವೇ ಕಾರಣ ಎಂದು ಹೇಳಲಾಗುತ್ತಿದ್ದು, ಒಂದು ವೇಳೆ ಬಹುಮತ ವಿಲ್ಲದೇ ಏಕೈಕ ದೊಡ್ಡ ಪಕ್ಷ ಎಂಬ ಕಾರಣಕ್ಕೆ ಬಿಜೆಪಿ ಸರ್ಕಾರ ರಚನೆ ಮಾಡುವ ಅವಕಾಶ ಕೊಟ್ಟರೆ ಆ ಬಳಿಕ ಬಹುಮತ ಸಾಬೀತಿಗಾಗಿ ಬಿಜೆಪಿ ಮತ್ತೆ ತನ್ನ ಆಪರೇಷನ್ ಕಮಲ ಜಾರಿ ಮಾಡುವ ಸಾದ್ಯತೆ ಇದೆ. ಈ ವೇಳೆ ಸ್ಥಳೀಯ ಪಕ್ಷಗಳ ಸಂಸದರನ್ನು ತನ್ನತ್ತ ಸೆಳೆದು ಸ್ಥಳೀಯ ಪಕ್ಷಗಳಲ್ಲಿ ಭಿನ್ನಮತ ತಲೆದೋರಿ, ಪಕ್ಷ ಒಡೆಯುವ ಸಾಧ್ಯತೆ ಗಳಿರುತ್ತವೆ ಎಂಬ ಭೀತಿಯಿಂದಾಗಿ ವಿಪಕ್ಷಗಳು ಈ ಅಚ್ಚರಿ ನಿಲುವಿಗೆ ಮುಂದಾಗಿದೆ ಎನ್ನಲಾಗಿದೆ.
ಒಟ್ಟು 543 ಸದಸ್ಯ ಬಲದ ಲೋಕಸಭೆಯಲ್ಲಿ 272 ಮ್ಯಾಜಿಕ್ ನಂಬರ್ ಆಗಿದ್ದು, 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 282 ಸ್ಥಾನಗಳನ್ನು ಪಡೆದಿತ್ತು. ಅಂತೆಯೇ ಎನ್ ಡಿಎ ಮೈತ್ರಿಕೂಟ 336 ಸ್ಥಾನಗಳನ್ನು ಹೊಂದಿತ್ತು.