ಕಾಸರಗೋಡು: ಜಿಲ್ಲೆಯ ನಿರುದ್ಯೋಗಿಗಳಿಗೆ ಸ್ವ ಉದ್ಯೋಗ ಘಟಕಗಳನ್ನು ಆರಂಭಿಸಲು ಉದ್ಯೋಗ ವಿನಿಮಯ ಕೇಂದ್ರ ಸಹಾಯ ಹಸ್ತ ನೀಡಲಿದೆ.
ಉದ್ಯೋಗ ವಿನಿಮಯ ಕೇಂದ್ರದ ವಿವಿಧ ಯೋಜನೆಗಳಾದ ಜೋಬ್ ಕ್ಲಬ್, ಕೆಸ್ರೂ, ಶರಣ್ಯ ಸ್ವ ಉದ್ಯೋಗ ಯೋಜನೆ ಇತ್ಯಾದಿಗಳ ಮುಖಾಂತರ ಸ್ವ ಉದ್ಯೋಗ ಆರಂಭಕ್ಕೆ ಸಾಲ ನೀಡಲಾಗುತ್ತಿದೆ. ಈ ಆರ್ಥಿಕ ವರ್ಷದಲ್ಲಿ ಕೆಸ್ರೂ, ಜೋಬ್ ಕ್ಲಬ್, ಶರಣ್ಯ ಸ್ವ ಉದ್ಯೋಗ ಯೋಜನೆಗಳ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು.
ಜೋಬ್ ಕ್ಲಬ್ ಯೋಜನೆ ಪ್ರಕಾರ ಶೇ.25 ಸಬ್ಸಿಡಿಯೊಂದಿಗೆ ಗರಿಷ್ಠ 10 ಲಕ್ಷ ರೂ. ಸಾಲ ದೊರೆಯಲಿದೆ. 21ರಿಂದ 45 ವರ್ಷ ಪ್ರಾಯದ ವರ್ಷಕ್ಕೆ ಒಂದು ಲಕ್ಷ ರೂ. ಆದಾಯ ಹೊಂದಿರುವ ಕನಿಷ್ಠ ಇಬ್ಬರಿರುವ ತಂಡಕ್ಕೆ ಅರ್ಜಿ ಸಲ್ಲಿಸಬಹುದು. ಶೇ.20 ಸಬ್ಸಿಡಿ ಸಹಿತ ಗರಿಷ್ಠ ಒಂದು ಲಕ್ಷ ರೂ. ಸಾಲ ಲಭಿಸುವ 21ರಿಂದ 50 ವರ್ಷ ಪ್ರಾಯದವರಾಗಿದ್ದು, ಒಂದು ಲಕ್ಷ ರೂ.ಗಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವವರು ಕೆಸ್ರೂ(ಕೇರಳ ಸ್ಟೇಟ್ ಸೆಲ್ ಎಂಪ್ಲಾಯಿಮೆಂಟ್ ಸ್ಕಿಂ ಫಾರ್ ದಿ ರೆಜಿಸ್ಟರ್ಡ್ ಅನ್ ಎಂಪ್ಲಾಯ್ಡ್) ಯೋಜನೆಗೆ ಅರ್ಜಿ ಸಲ್ಲಿಸಬಹುದು.
30 ವರ್ಷಕ್ಕಿಂತ ಕಡಿಮೆ ವಯೋಮಾನದ ಅವಿವಾಹಿತೆಯರಿಗೆ, ವಿಧವೆಯರಿಗೆ, ವಿವಾಹ ವಿಚ್ಛೇದಿತರಿಗೆ, ಕಳೆದ 7 ವರ್ಷಗಳಿಂದ ಪತಿ ನಾಪತ್ತೆಯಾಗಿರುವವರಿಗೆ, ಪತಿ ತೊರೆದು ಹೋದವರಿಗೆ, ಪರಿಶಿಷ್ಟ ಪಂಗಡದ ಅವಿವಾಹಿತರಾಗಿದ್ದು ತಾಯಂದಿರಾದವರಿಗೆ ಶರಣ್ಯ ಸ್ವ ಉದ್ಯೋಗ ಯೋಜನೆ ಪ್ರಕಾರ 50 ಸಾವಿರ ರೂ. ಸಾಲ ದೊರೆಯಲಿದೆ. ಈ ಯೋಜನೆಯಲ್ಲಿ ಸಾಲದ ಅರ್ಧಾಂಶ ಮಾತ್ರ ಮರುಪಾತಿಸಿದರೆ ಸಾಕು.
ಅರ್ಜಿ ಫಾರಂ ಕಾಸರಗೋಡು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಹೊಸದುರ್ಗ ಟೌನ್ ಉದ್ಯೋಗ ವಿನಿಮಯ ಕೇಂದ್ರ, ಮಂಜೇಶ್ವರ ಬ್ಯೂರೋಗಳಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: ಕಾಸರಗೋಡು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ-04994-255582, ಹೊಸದುರ್ಗ ಟೌನ್ ಉದ್ಯೋಗ ವಿನಿಮಯ ಕೇಂದ್ರ-04672-209068 ಸಂಪರ್ಕಿಸಬಹುದಾಗಿದೆ.