HEALTH TIPS

ಕನ್ನಡ ಹೋರಾಟ ಸಮಿತಿಯ ಮಹತ್ತರ ಸಭೆ-ಪ್ರಾದೇಶಿಕ ಸಮಿತಿ ರಚನೆಗೆ ಒಕ್ಕೊರಲ ನಿರ್ಧಾರ

         
         ಕುಂಬಳೆ: ಗಡಿನಾಡು ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರು ಅನುಭವಿಸುತ್ತಿರುವ ಸವಾಲುಗಳಿಗೆ ಧ್ವನಿಯಾಗಿ ಸಂಘಟನಾತ್ಮಕವಾಗಿ ಹೋರಾಟದ ಮೂಲಕ ಪರಿಹಾರ ಕಂಡುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಸಮಸ್ತ ಕನ್ನಡಿಗರ ಪೂರ್ಣ ಪ್ರಮಾಣದ ಬೆಂಬಲ ಅಗತ್ಯವಿದೆ. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲೂ ಕನ್ನಡ ಹೋರಾಟ-ಜಾಗೃತಿಗಾಗಿ ಕಾವಲುಪಡೆಯಂತೆ ಪ್ರಾದೇಶಿಕ ಸಮಿತಿಗಳನ್ನು ಶೀಘ್ರ ರಚಿಸಲಾಗುವುದು ಎಂದು ಕನ್ನಡ ಹೋರಾಟ ಸಮಿತಿಯ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳುಕ್ಕುರಾಯ ಅವರು ತಿಳಿಸಿದರು.
        ಕಾಸರಗೋಡಿನ ಕನ್ನಡಿಗರು, ವಿದ್ಯಾರ್ಥಿಗಳು ಮತ್ತು ಉದ್ಯೋಗಾರ್ಥಿಗಳು ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಮತ್ತು ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಕನ್ನಡ ಹೋರಾಟ ಸಮಿತಿಯು ಭಾನುವಾರ ಬೆಳಿಗ್ಗೆ ಕಾಸರಗೋಡು ಬೀರಂತಬೈಲಿನ ಕನ್ನಡ ಅಧ್ಯಾಪಕ ಭವನದಲ್ಲಿ ಆಯೋಜಿಸಿದ ಬೃಹತ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
       ಗಡಿನಾಡಿನ ಕನ್ನಡ ಭಾಷೆಯ ಬಳಕೆಯನ್ನು ದಿನನಿತ್ಯದ ಕಚೇರಿ ವ್ಯವಹಾರಗಳು, ಸಾರ್ವಜನಿಕ ಸಮಾರಂಭಗಳಲ್ಲಿ ಬಳಸುವಲ್ಲಿ ಅಧಿಕೃತರನ್ನು ಎಚ್ಚರಿಸುವಲ್ಲಿ ಕೇವಲ ಮನವಿಗಳಂತಹ ಕ್ರಮಗಳಿಂದ ಮಾತ್ರ ಸಾಧ್ಯವಾಗದು. ಈ ನಿಟ್ಟಿನಲ್ಲಿ ಪ್ರಬಲ ಸಂಘಟಿತ ಪ್ರತಿಭಟನೆಯ ಮೂಲಕ ಎಚ್ಚರಿಸುವ ಅಗತ್ಯವಿದೆ ಎಂದು ಅವರು ಈ ಸಂದರ್ಭ ತಿಳಿಸಿದರು. ಸರಕಾರಿ ಸುತ್ತೋಲೆಗಳು ಕನ್ನಡ ಭಾಷೆಯ ಮೂಲಕ ಪ್ರಕಟಗೊಳ್ಳಬೇಕು. ಜೊತೆಗೆ ಜನಸಾಮಾನ್ಯರ ಅಹವಾಲಿಗೆ ಸರಕಾರಿ ಕಚೇರಿಗಳಿಂದ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಉತ್ತರಗಳನ್ನು ನೀಡುವಂತೆ ತಿರುವನಂತಪುರದಲ್ಲಿರುವ ವಿವಿಧ ಇಲಾಖೆಗಳ ಪ್ರಧಾನ ಕಾರ್ಯಾಲಯಗಳ ಮೂಲಕ ಸುತ್ತೋಲೆಗಳನ್ನು ಹೊರಡಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ. ಜೊತೆಗೆ ಜನಸಾಮಾನ್ಯರೂ ಕಚೇರಿಗಲಲ್ಲಿ ಕನ್ನಡ ಭಾಷೆಯಲ್ಲೇ ಉತ್ತರಗಳನ್ನು ಪಡೆಯುವ ನಿಟ್ಟಿನಲ್ಲಿ ಹೋರಾಡುವ ಅಗತ್ಯವನ್ನು ಮನಗಾಣಬೇಕು.ಈ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸಲಾಗುವುದೆಮದು ಬಳ್ಳುಕ್ಕುರಾಯ ಅವರು ತಿಳಿಸಿದರು. ಸರಕಾರಿ ಕಚೇರಿಗಳಿಗೆ ವಿವಿಧ ಅಗತ್ಯಗಳಿಗಾಗಿ ನೀಡುವ ಮನವಿ, ಅರ್ಜಿಗಳ ಕೊನೆಯಲ್ಲಿ ಕನ್ನಡದಲ್ಲೇ ಉತ್ತರಿಸುವ ಒಕ್ಕಣೆಯನ್ನು ಪ್ರತಿಯೊಬ್ಬರೂ ಬಳಸುವಂತೆ ಅವರು ಈ ಸಂದರ್ಭ ವಿನಂತಿಸಿದರು. ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಸಮಸ್ಯೆಗಳಿಗೆ ಸೂಕ್ತ ಪರಿಹಾರೋಪಾಯಗಳ ನಿರ್ವಹಣೆಗೆ ಕನ್ನಡಿಗ ನ್ಯಾಯವಾದಿಗಳ ಸುದೃಢ ಸಂಘಟನೆಗೆ ರೂಪು ನೀಡಲಾಗುವುದೆಂದು ಅವರು ಸಭೆಯಲ್ಲಿ ತಿಳಿಸಿದರು.
   ಕನ್ನಡ ಹೋರಾಟ ಸಮಿತಿಯ ಉಪಾಧ್ಯಕ್ಷ ಎಂ.ವಿ.ಮಹಾಲಿಂಗೇಶ್ವರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ 600ಕ್ಕಿಂತಲೂ ಮಿಕ್ಕಿದ ಕನ್ನಡ ಶಿಕ್ಷಕಿಯರಿರುವ ಅಂಗನವಾಡಿ ಕೇಂದ್ರಗಲಲ್ಲಿ ಕನ್ನಡ ಪಠ್ಯ ಪುಸ್ತಕಗಳು ಮುಂದಿನ ತಿಂಗಳು ವಿತರಿಸುವ ನಿಟ್ಟಿನಲ್ಲಿ ಸಿದ್ದತೆ ಪೂರ್ಣಗೊಂಡಿದೆ. ಜೊತೆಗೆ ಜಿಲ್ಲೆಯ ಮಂಜೇಶ್ವರ ಹಾಗೂ ಕಾಸರಗೋಡು ತಾಲೂಕಿನ ಅಂಗನವಾಡಿ ಮೇಲ್ವಿಚಾರಕಿಯರಾಗಿ ಕನ್ನಡ ಬಲ್ಲವರನ್ನೇ ನೇಮಕಗೊಳಿಸುವ ಬಗ್ಗೆ ಕಾನೂನಾತ್ಮಕವಾಗಿ ಯತ್ನಿಸಲಾಗುತ್ತಿದೆ ಎಂದು ತಿಳಿಸಿದರು. 2018ರ ಆ.6 ರಂದು ರಾಜ್ಯ ಸರಕಾರ ಹೊರಡಿಸಿದ 8/2018 ಸಂಖ್ಯೆಯ ಸುತ್ತೋಲೆಯಂತೆ ಜಿಲ್ಲೆಯ ಎಲ್ಲಾ ಸರಕಾರಿ ಕಾರ್ಯಾಲಯಗಳಲ್ಲಿ ಕನ್ನಡ ಭಾಷೆಯಲ್ಲೇ ಮಾಹಿತಿ ನೀಡುವುದು, ಅರ್ಜಿ ಪಡೆಯುವುದು ಮತ್ತು ಉತ್ತರ ನೀಡಲು ಸರಕಾರ ಆದೇಶಿಸಿದೆ. ಆದರೆ ಅಧಿಕಾರಿ ವರ್ಗದ ಮಲತಾಯಿ ಧೋರಣೆಯಿಂದ ಕನ್ನಡಿಗರಿಗೆ ಸ್ಪಷ್ಟ ನ್ಯಾಯ ದೊರಕುವಲ್ಲಿ ತೊಡಕಾಗುತ್ತಿದ್ದು, ಈ ಬಗ್ಗೆ ಜನಸಾಮಾನ್ಯರು ಕಾವಲು ಭಟರಂತೆ ಹಕ್ಕುಸಂರಕ್ಷಣೆಗೆ ಪ್ರತಿಭಟನೆಯ ಮೂಲಕ ನ್ಯಾಯದೊರಕಿಸಿಕೊಳ್ಳುವಲ್ಲಿ ಪ್ರಯತ್ನಿಸಬೇಕು ಎಂದು ತಿಳಿಸಿದರು. ಅಲ್ಲದೆ ಜಿಲ್ಲೆಯ ವಿವಿಧ ಇಲಾಖೆಗಳ ಕನ್ನಡಿಗರ ನೌಕರರ ಸಂಘವನ್ನು ಪ್ರಬಲವಾಗಿ ರಚಿಸಲು ಮುಂದಾಗುವುದಾಗಿ ಅವರು ತಿಳಿಸಿದರು.
   ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಎಸ.ವಿ.ಭಟ್, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಮುಖಂಡರಾದ ಪ್ರದೀಪ್ ಶೆಟ್ಟಿ ಬೇಳ, ಕಾಸರಗೋಡು ಸರಕಾರಿ ಕಾಲೇಜು ಕನ್ನಡ ಸಿರಿಚಂದನ ಯುವ ಬಳಗದ ರಾಜೇಶ್, ಕನ್ನಡ ಹೋರಾಟ ಸಮಿತಿಯ ಮುಖಂಡರುಗಳಾದ ನ್ಯಾಯವಾದಿ ಅಡೂರು ಉಮೇಶ್ ನಾೈಕ್, ಜಿಲ್ಲಾ ಪಂಚಾಯತಿ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ಟಿ.ಶಂಕರನಾರಾಯಣ ಭಟ್, ಗೋಪಾಲ ಶೆಟ್ಟಿ ಅರಿಬೈಲು ಮೊದಲಾದವರು ಉಪಸ್ಥಿತರಿದ್ದು ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದರು. ಪ್ರಮುಖರಾದ ಪತ್ರಕರ್ತ, ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಆಯಿಷಾ ಎ.ಎ.ಪೆರ್ಲ, ಗಣೇಶ್ ಪ್ರಸಾದ್, ಎಚ್.ಎಸ್.ಭಟ್ ಹೊಸದುರ್ಗ, ಕೇಶವ ಭಟ್ ಪೆರ್ಮುದೆ, ಪ್ರಭಾವತಿ ಕೆದಿಲಾಯ, ಶ್ರೀಶಕುಮಾರ ಪಂಜಿತ್ತಡ್ಕ, ವೀರೇಶ್ವರ ಕರ್ಮರ್ಕರ್ ಸಲಹೆಗಳನ್ನು ನೀಡಿದರು.
   ಹೋರಾಟ ಸಮಿತಿಯ ಕಾರ್ಯದರ್ಶಿ ದಿನೇಶ್ ಚೆರುಗೋಳಿ ಸ್ವಾಗತಿಸಿ, ಸತೀಶ್ ಕೂಡ್ಲು ವಂದಿಸಿದರು. ಪ್ರಧಾನ ಕಾರ್ಯದರ್ಶಿ ಕೆ.ಭಾಸ್ಕರ ಕಾಸರಗೋಡು ಸಭೆ ನಿರ್ವಹಿಸಿದರು. ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ ನೂರಾರು ಮಂದಿ ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries