ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದು, ನಿನ್ನೆ ನಡೆದ ಎನ್ಕೌಂಟರ್ ನಲ್ಲಿ ಉಗ್ರರ ಗುಂಡೇಟಿಗೆ ಓರ್ವ ಯೋಧ ಹುತಾತ್ಮನಾಗಿ, ಮೂವರು ಉಗ್ರರು ಸಾವನ್ನಪ್ಪಿದ್ದಾರೆ.
ಪುಲ್ವಾಮ ಜಿಲ್ಲೆಯ ದಲಿಪೋರಾದಲ್ಲಿನ ಮನೆಯೊಂದರಲ್ಲಿ ಉಗ್ರರು ಅಡಗಿರುವ ಕುರಿತು ಮಾಹಿತಿ ಪಡೆದ ಸೇನಾಪಡೆಗಳು ಕೂಡಲೇ ಉಗ್ರರಿದ್ದ ಮನೆಯನ್ನು ಸುತ್ತುವರೆದಿದ್ದಾರೆ. ಸೇನಾಪಡೆಗಳನ್ನು ನೋಡುತ್ತಲೇ ಸೈನಿಕರ ಮೇಲೆ ಗುಂಡಿನ ಸುರಿಮಳೆ ಗರೆದಿದ್ದಾರೆ. ಈ ವೇಳೆ ಸೇನಾಪಡೆಯ ಓರ್ವ ಯೋಧನಿಗೆ ಗುಂಡೇಟು ತಗುಲಿದ್ದು, ಕೂಡಲೇ ಅವರನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.
ಬಳಿಕ ನಡೆದ ಕಾರ್ಯಾಚರಣೆಯಲ್ಲಿ ಸೇನಾಪಡೆಗಳು ಕೂಡ ಭಾರಿ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಮನೆಯಲ್ಲಿದ್ದ ಉಗ್ರರ ಪೈಕಿ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಮನೆಯಲ್ಲಿ ಮತ್ತಷ್ಟು ಉಗ್ರರಿರುವ ಶಂಕೆ ಇದ್ದು, ಕಾರ್ಯಾಚರಣೆ ಮುಂದುವರೆದಿದೆ. ಮುಂಜಾಗ್ರತಾ ಕ್ರಮವಾಗಿ ದಲಿಪೋರಾ ಪ್ರಾಂತ್ಯದ ಸುತ್ತಮುತ್ತ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.