ಪೆರ್ಲ:ಎಣ್ಮಕಜೆ, ಬೆಳ್ಳೂರು, ಕುಂಬ್ಡಾಜೆ ಗ್ರಾ.ಪಂ.ಗಡಿ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಿಂದ ಬೇಸಗೆ ಋತುವಿನಲ್ಲಿ ತೀವ್ರ ಕುಡಿಯುವ ನೀರು ಕ್ಷಾಮ ಎದುರಿಸುತ್ತಿರುವ ಪ್ರದೇಶಗಳನ್ನು ಕೇಂದ್ರೀಕರಿಸಿ ಸುದರ್ಶನ ಸಂಘಟನೆ ಜಲಯಜ್ಞ ಯೋಜನೆಯಂತೆ ಕುಡಿಯುವ ನೀರು ಪೂರೈಕೆ ನಡೆಸುತ್ತಿದೆ.
ಸಂಘಟನೆಯ ಸ್ಥಾಪಕ ಸದಸ್ಯ ಅಜಿತ್ ಸ್ವರ್ಗ ನೇತೃತ್ವದಲ್ಲಿ ಮೂರು ವರ್ಷಗಳ ಹಿಂದೆ ನೀರು ವಿತರಣೆ ಆರಂಭಿಸಿದ್ದು ಈ ವರ್ಷದ ನೀರು ವಿತರಣೆಗೆ ಸದಸ್ಯ ರಾಧಾಕೃಷ್ಣ ಭಟ್ ಪತ್ತಡ್ಕ ಏ.25ರಂದು ಚಾಲನೆ ನೀಡಿದ್ದರು.ವಾರದಲ್ಲೆರಡು ಬಾರಿಯಂತೆ ಸಂಘಟನೆ ನೀರು ವಿತರಣೆ ನಡೆಸುತ್ತಾ ಬರುತ್ತಿದೆ.
ಸಂಘಟನೆ ಸದಸ್ಯರು ಹಾಗೂ ಸಹೃದಯಿಗಳ ಜಲಮೂಲಗಳಿಂದ ಸಂಗ್ರಹಿಸಿದ ನೀರನ್ನು ಸದಸ್ಯ ಉದಯಶಂಕರ್ ವಾಣೀನಗರ ಉಚಿತವಾಗಿ ನೀಡಿದ ಟ್ಯಾಂಕ್ ನಲ್ಲಿ ತುಂಬಿಸಿ ಪಿಕ್ ಅಪ್ ವಾಹನದಲ್ಲಿ ಸರಬರಾಜು ನಡೆಸಲಾಗುತ್ತಿದೆ.
ಆರನೇ ಆವೃತ್ತಿ ಕುಡಿಯುವ ನೀರು ವಿತರಣೆ ಭಾಗವಾಗಿ ಸ್ವರ್ಗ ವಾಣೀನಗರ ರಸ್ತೆಯ ದೇಲಂತರುವಿನ ರಾಮ, ಸುಂದರಿ ದಂಪತಿಗಳು, ಸೂರಂಬೈಲುಕಟ್ಟೆಯ ಗಿರಿಜಾ, ಯಶೋಧಾ, ಇತರ ಮೂರು ಕುಟುಂಬಗಳು,
ಕೆದಂಬಾಯಿಮೂಲೆಯ ಮೂರು ಕುಟುಂಬಗಳು, ಕೊಡೆಂಕೀರಿ, ಪಡ್ಪು, ಗೋಳಿಕಟ್ಟೆ, ಬೈಲಮೂಲೆ, ಇಳಂತೋಡಿ, ಪಳ್ಳತ್ತಮೂಲೆ, ನೆಕ್ಕರೆಕಾಡು, ಚೆನ್ನುಮೂಲೆ, ಕುತ್ತಾಜೆ ಕಾಲೊನಿಯ ಹಲವು ಕುಟುಂಬಗಳಿಗೆ ಮಂಗಳವಾರ ನೀರು ವಿತರಿಸಲಾಯಿತು. ಜಗದೀಶ್ ಕುತ್ತಾಜೆ, ಪ್ರದೀಪ್ ಶಾಂತಿಯಡಿ, ರಮಾನಾಥ, ನೇತೃತ್ವ ವಹಿಸಿದರು.
ಅಭಿಮತ:
ಸ್ವರ್ಗ ಸಮೀಪ ದೇಲಂತರುವಿನ ರಾಮ, ಸುಂದರಿ ದಂಪತಿ ಪಾಣಾಜೆ ಆರ್ಲಪದವಿಗೆ ಕೂಲಿಗೆ ತೆರಳುತ್ತಿದ್ದು ಅಲ್ಲಿಂದ 120 ರಿಕ್ಷಾ ಬಾಡಿಗೆ ನೀಡಿ ಪ್ರತಿದಿನ ಸಣ್ಣ ಪಾತ್ರೆಗಳಲ್ಲಿ ನೀರು ತರುತ್ತಿದ್ದರು. ಪ್ರಕೃತಿದತ್ತ ಸಂಪತ್ತು ಯಾವುದೇ ಆಗಿದ್ದರೂ ಅದು ಶಾಶ್ವತವಲ್ಲ.ದೇವರು ನಮ್ಮ ಅಗತ್ಯಕ್ಕೂ ಹೆಚ್ಚಿನ ನೀರು ನೀಡಿದ್ದಾನೆ.ಸುದರ್ಶನ ಸಂಘಟನೆ ಕಳೆದ ಮೂರು ವಾರಗಳಿಂದ ನೀರಿನ ಕ್ಷಾಮ ಇರುವಲ್ಲಿ ನೀರು ವಿತರಿಸುತ್ತಿದ್ದು ಸದಸ್ಯರು ಅಪೇಕ್ಷಿಸಿದಂತೆ ಉಚಿತವಾಗಿ ನೀರು ನೀಡುತ್ತಿದ್ದೇವೆ.
-ರಾಜೀವಿ ಶ್ರೀನಿವಾಸ್ ಆಚಾರ್ಯ, ಪಡ್ರೆ ಸೂರಂಬೈಲು ಕಟ್ಟೆ
.........................................................................................................
2)
'ಕೊಡೆಂಕೀರಿ ಭಾಗದಲ್ಲಿ ನೀರಿನ ಅಭಾವ ತೀವ್ರವಾಗಿದೆ.ಅಲ್ಲಿನ ಪಂಚಾಯಿತಿ ಕೊಳವೆ ಬಾವಿ ಕೈಕೊಟ್ಟಿದೆ.ಪಿಕ್ ಅಪ್ ವಾಹನ ಹಾದು ಹೋಗುತ್ತಿದ್ದಂತೆ ಮಹಿಳೆಯರು ಕೊಡದೊಂದಿಗೆ ಓಡೋಡಿ ಬರುತ್ತಿರುವುದು ನೀರಿನ ತೀವ್ರ ಅಭಾವನ್ನು ಸಾರಿ ಹೇಳುತ್ತಿದೆ.ಯಾರೊಬ್ಬರೂ ಒಂದು ದಿನವೂ ಕುಡಿಯುವ ನೀರಿನ ಕೊರತೆ ಅನುಭವಿಸದಂತೆ ಸಂಘಟನೆ ನೀರು ವಿತರಣೆಗೆ ಶ್ರಮಿಸುತ್ತಿದೆ'
ಜಗದೀಶ್ಚಂದ್ರ ಕುತ್ತಾಜೆ
-ಸುದರ್ಶನ ಸದಸ್ಯ
..........................................................................................................
3)'ಸಂಘಟನೆ ಸದಸ್ಯರು ಸೇರಿದಂತೆ 10ದಾನಿಗಳ ಸಹಕಾರದೊಂದಿಗೆ ನೀರು ವಿತರಣೆ ವಾಹನದ ಬಾಡಿಗೆ ನೀಡುತ್ತಿದ್ದೇವೆ.ವಿತರಣೆ ಸಂಬಂಧಿಸಿ ಆಯಾ ಪ್ರದೇಶಗಳ ಸಹೃದಯಿಗಳ ಜಲಮೂಲಗಳಿಂದ ವಿತರಣೆಯ ನೀರು ಸಂಗ್ರಹಿಸುತ್ತಿದ್ದೇವೆ.'
-ಪ್ರದೀಪ್ ಶಾಂತಿಯಡಿ
ಸುದರ್ಶನ ಸದಸ್ಯ, ನಾಲಂದಾ ಕಾಲೇಜು ವಿದ್ಯಾರ್ಥಿ