ನವದೆಹಲಿ: ಮತ್ತೊಮ್ಮೆ ಪ್ರಧಾನಿ ಗಾದಿಗೆ ಏರಲು ಸಜ್ಜಾಗಿರುವ ನರೇಂದ್ರ ಮೋದಿ ತಮ್ಮ ಸಚಿವ ಸಂಪುಟಕ್ಕೆ ಹೊಸ ಸಚಿವರುಗಳ ಆಯ್ಕೆ ಕೆಲಸಕ್ಕೆ ಚಾಲನೆ ನೀಡಿದ್ದಾರೆ. ಇದಕ್ಕೆ ಪಕ್ಷದ ಬೇರೆ ನಾಯಕರ ಜೊತೆ ಸಮಾಲೋಚನೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.
ಮುಂದಿನ 5 ವರ್ಷಗಳಲ್ಲಿ ಪಕ್ಷದಲ್ಲಿ ಸಮರ್ಥ ನಾಯಕತ್ವ ವಹಿಸುವ ಮತ್ತು ಸರ್ಕಾರದಲ್ಲಿ ಖಾತೆಗಳಿಗೆ ಸೂಕ್ತ ಸಂಸದರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ನರೇಂದ್ರ ಮೋದಿ ಗಮನಹರಿಸಿದ್ದಾರೆ. ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ ಶೇಕಡಾ 50ರಷ್ಟು ಈ ಬಾರಿ ಸಂಪುಟದಲ್ಲಿ ಹೊಸ ಮುಖಗಳಿಗೆ ಮಣೆ ನೀಡಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಬಾರಿ ದೇಶದ ದಕ್ಷಿಣ ಮತ್ತು ಪೂರ್ವ ವಲಯದ ಸಂಸದರಿಗೆ ಮೋದಿ ಹೆಚ್ಚಿನ ಪ್ರಾಧಾನ್ಯತೆ ನೀಡುವ ಸಾಧ್ಯತೆಯಿದೆ.
ಸ್ಥಳೀಯ ಸಮತೋಲನ ಮತ್ತು ನವ ಭಾರತ ಪರ ನಾಯಕತ್ವ ಸೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸಚಿವರುಗಳನ್ನು ಎನ್ ಡಿಎ 2.0 ಸರ್ಕಾರದಲ್ಲಿ ಆಯ್ಕೆ ಮಾಡುವ ಸಾಧ್ಯತೆಯಿದೆ. ವೃತ್ತಿಪರರಿಗೆ ಆದ್ಯತೆ ನೀಡುವ ಸಾಧ್ಯತೆಯಿದೆ. ಬಿಜೆಪಿ ಈಗಲೂ ಕರ್ನಾಟಕ ಸೇರಿದಂತೆ ಇತರ ದಕ್ಷಿಣದ ರಾಜ್ಯಗಳಿಗೆ ಪ್ರಾತಿನಿಧ್ಯ ನೀಡಲು ಬದ್ಧವಾಗಿದ್ದು ಈ ನಿಟ್ಟಿನಲ್ಲಿ ಮಿಷನ್ ಸೌತ್ ಕಾರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದಾರೆ.
ಸಚಿವ ಸಂಪುಟ ರಚನೆ ವೇಳೆ ಉತ್ತರ ಪ್ರದೇಶಕ್ಕೆ ಸಿಂಹಪಾಲು ದೊರಕುವ ಸಾಧ್ಯತೆಯಿದೆ. ಬಿಹಾರಕ್ಕೆ 8, ಮಧ್ಯ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ಮತ್ತು ರಾಜಸ್ತಾನಗಳಿಗೆ ತಲಾ 6 ಮಂತ್ರಿ ಸ್ಥಾನ, ಪಶ್ಚಿಮ ಬಂಗಾಳ, ಒಡಿಶಾಗಳಿಗೆ ತಲಾ ಮೂರು ಸಚಿವ ಸ್ಥಾನ ಲಭಿಸುವ ಸಾಧ್ಯತೆಯಿದೆ. ಅಸ್ಸಾಂ, ಕೇರಳ, ತೆಲಂಗಾಣ ಮತ್ತು ಈಶಾನ್ಯ ರಾಜ್ಯಗಳಿಗೆ ಪ್ರಾತಿನಿಧ್ಯ ಸಿಗುವ ಸಾಧ್ಯತೆಯಿದೆ.
ಹರ್ಯಾಣ, ಜಾಖರ್ಂಡ್ ಮತ್ತು ಮಹಾರಾಷ್ಟ್ರಗಳಲ್ಲಿ ಬುಡಕಟ್ಟು ಮತ್ತು ಪರಿಶಿಷ್ಟ ಜಾತಿ ನಾಯಕರುಗಳಿಗೆ ಆದ್ಯತೆ ನೀಡಲು ವಸುಂಧರಾ ರಾಜೆ ಮತ್ತು ರಮಣ್ ಸಿಂಗ್ ಅವರಿಗೆ ಈ ಬಾರಿ ಮೋದಿ ಸಂಪುಟದಲ್ಲಿ ಸ್ಥಾನ ದೊರಕುವ ಸಾಧ್ಯತೆಯಿದೆ.
ಮಾಜಿ ಐಎಎಸ್ ಅಧಿಕಾರಿ ಅಪರಾಜಿತ ಸಾರಂಗಿಯವರಿಗೆ ರಾಜ್ಯ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ. ಎನ್ ಡಿಎ ಮೈತ್ರಿಕೂಟ ಜೆಡಿಯುನಲ್ಲಿ ಕೂಡ ಕೆಲವರಿಗೆ ಮೋದಿ ಸಂಪುಟದಲ್ಲಿ ಮಣೆ ಹಾಕುವ ಸಾಧ್ಯತೆಯಿದೆ.
ನರೇಂದ್ರ ಮೋದಿಯವರು ಎರಡನೇ ಬಾರಿ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಮಾರಂಭಕ್ಕೆ ಜಿ-20 ರಾಷ್ಟ್ರಗಳ ನಾಯಕರುಗಳಿಗೆ ಆಹ್ವಾನ ನೀಡಲಾಗುತ್ತಿದೆ. ಮೋದಿಯವರ ಜೊತೆ ಹೊಸ ಸಚಿವರುಗಳು ಕೂಡ 30ರಂದೇ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈ ನಡುವೆ ಮೋದಿಯವರು ವಾರಣಾಸಿಗೆ ಮತ್ತು ಅಹಮದಾಬಾದ್ ಗೆ ತೆರಳಿ ತಮ್ಮ ತಾಯಿಯವರ ಆಶೀರ್ವಾದ ಪಡೆಯಲಿದ್ದಾರೆ.