ನವದೆಹಲಿ: ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಿಸಿದತೆ ಸುಪ್ರೀಂ ಕೋರ್ಟ್ ಆಂತರಿಕ ವಿಚಾರಣಾ ಸಮಿತಿ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರಿಗೆ ಕ್ಲೀನ್ ಚಿಟ್ ನೀಡಿದ್ದು, ಆರೋಪ ಆಧಾರ ರಹಿತ ಎಂದು ವರದಿ ನೀಡಿದೆ.
ಸಿಜೆಐ ವಿರುದ್ಧ ಸುಪ್ರೀಂ ಕೋರ್ಟ್ ಮಾಜಿ ಉದ್ಯೋಗಿಯೊಬ್ಬರು ಮಾಡಿದ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಮೂವರು ನ್ಯಾಯಾಧೀಶರನ್ನೊಳಗೊಂಡ ಆಂತರಿಕ ವಿಚಾರಣಾ ಸಮಿತಿ ಮೇ 5ರಂದು ವರದಿ ಸಲ್ಲಿಸಿದ್ದು, ಮಹಿಳೆ ಮಾಡಿರುವ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ರದ್ದುಗೊಳಿಸಿದೆ.
ವಜಾಗೊಂಡಿದ್ದ ನ್ಯಾಯಾಂಗ ಉದ್ಯೋಗಿಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು. ಮುಖ್ಯ ನ್ಯಾಯಮೂರ್ತಿಗಳು ಈ ಆರೋಪವನ್ನು ತಿರಸ್ಕರಿಸಿದ್ದರು. ಹಾಗಿದ್ದರೂ ನ್ಯಾಯಾಂಗದ ಘನತೆಯನ್ನು ಎತ್ತಿ ಹಿಡಿಯುವುದಕ್ಕಾಗಿ ಜಸ್ಟಿಸ್ ಎಸ್.ಎ ಬೊಬ್ಡೆ ನೇತೃತ್ವದ ತ್ರಿಸದಸ್ಯ ಆಂತರಿಕ ವಿಚಾರಣಾ ಸಮಿತಿಯ ಮೂಲಕ ಆರೋಪದ ಕುರಿತು ತನಿಖೆ ನಡೆಸಲಾಗಿತ್ತು.
ಇದೀಗ ಈ ಸಮಿತಿ ಮುಖ್ಯ ನ್ಯಾಯಮೂರ್ತಿಗಳ ಮೇಲಿನ ಆರೋಪಗಳಿಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಹೇಳಿ ಅವರನ್ನು ಆರೋಪಮುಕ್ತಗೊಳಿಸಿದೆ.