ನವದೆಹಲಿ: ಬಾಹ್ಯಾಕಾಶದಲ್ಲಿ ಮತ್ತೊಂದು ಸಾಧನೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಿದ್ಧವಾಗಿದೆ.
ಇಸ್ರೋ ಮೇ.22 ರಂದು ಹೊಸ ಇಮೇಜಿಂಗ್ ಉಪಗ್ರಹವನ್ನು ಉಡಾವಣೆ ಮಾಡಲಿದೆ. ಈ ಮೂಲಕ ಭಾರತ ಬಾಹ್ಯಾಕಾಶದಿಂದ ಮತ್ತಷ್ಟು ಪರಿಣಾಮಕಾರಿಯಾಗಿ ನಿಗಾ ವಹಿಸುವುದಕ್ಕೆ ಸಾಧ್ಯವಾಗಲಿದೆ.
ರಿಸ್ಯಾಟ್-2ಬಿಆರ್ 1 ಮೇ.22 ರಂದು ಉಡಾವಣೆಯಾಗಲಿರುವ ಉಪಗ್ರಹವಾಗಲಿದೆ. ಹೊಸ ರಿಸ್ಯಾಟ್ ಉಪಗ್ರಹ ಈ ಹಿಂದಿನ ರಿಸ್ಯಾಟ್ ಉಪಗ್ರಹಕ್ಕಿಂತ ಅತ್ಯಾಧುನಿಕವಾಗಿದ್ದು, ರಿಸ್ಯಾಟ್ ನ x- ಬ್ಯಾಂಡ್ ಸಿಂಥೆಟಿಕ್ ಅಪೆಚ್ಯೂರ್ ರಡಾರ್ (ಎ???ಆರ್) ಎಲ್ಲಾ ರೀತಿಯ ಹವಾಮಾನಗಳಲ್ಲೂ ನಿಗಾ ವಹಿಸುವ ಸಾಮಥ್ರ್ಯವನ್ನು ಹೊಂದಿದ್ದು, ಇದು ಭದ್ರತಾ ಸಿಬ್ಬಂದಿಗಳಿಗೆ ಹೆಚ್ಚು ನೆರವಾಗಲಿದೆ.
ದಟ್ಟವಾದ ಮೋಡಗಳನ್ನು ಭೇದಿಸಿ ಭೂಮಿಯ ಮೇಲೆ 1 ಮೀಟರ್ ನಷ್ಟು ಅಂತರಲ್ಲಿ ಇರುವ 2 ವಸ್ತುಗಳನ್ನು ನಿಖರವಾಗಿ ತೋರುವ ಸಾಮಥ್ರ್ಯವನ್ನು ಈ ಉಪಗ್ರಹ ಹೊಂದಿರಲಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
ಭೂಮಿಯ ಮೇಲಿರುವ ಕಟ್ಟಡಗಳು ವಸ್ತುಗಳ ಮೇಲೆ ದಿನಕ್ಕೆ ಕನಿಷ್ಟ 2-3 ಬಾರಿ ಚಿತ್ರಗಳನ್ನು ತೆಗೆಯಲಿರುವ ಈ ಉಪಗ್ರಹ ಪ್ರಮುಖವಾಗಿ ಪಾಕ್ ಆಕ್ರಮಿತ ಕಾಶ್ಮೀರದ ಭಾಗದಲ್ಲಿರುವ ಜಿಹಾದಿ ಉಗ್ರರ ಕ್ಯಾಂಪ್ ಗಳ ಮೇಲೆ ಕಣ್ಣಿಟ್ಟಿರಲಿದೆ. ಎಲ್ಲಾ ಹವಾಮಾನಗಳಲ್ಲೂ ನಿಖರತೆಯ ಚಿತ್ರಗಳನ್ನು ಕಳಿಸುವ ಮೂಲಕ ಈ ಹೊಸ ಉಪಗ್ರಹ ಭಾರತೀಯ ಸೇನೆಗೆ ಉಗ್ರರ ಹೆಡೆಮುರಿಕಟ್ಟುವುದಕ್ಕೆ ಸಹಕಾರಿಯಾಗಲಿದೆ.