ಕಾಸರಗೋಡು: ಒಂದೆಡೆ ಏರುತ್ತಿರುವ ತಾಪಮಾನ, ಇನ್ನೊಂದೆಡೆ ಶುದ್ಧ ಕುಡಿಯುವ ನೀರಿಗಾಗಿ ಪರದಾಡುವ ಜನತೆ. ಈ ಮಧ್ಯೆ ಪ್ರಾಣಿ, ಪಕ್ಷಿಗಳಿಗೆ ಕುಡಿಯಲು ನೀರು ಒದಗಿಸುವ ಮೂಲಕ ಮಾನವೀಯತೆ ಮೆರೆಯುತ್ತಿರುವ ಕಾಕಿಪಡೆಯೊಂದು ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸದ್ದಿಲ್ಲದೆ ಚಟುವಟಿಕೆ ನಡೆಸುತ್ತಿದೆ.
ಮನುಷ್ಯರಂತೆ ಪ್ರಾಣಿ, ಪಕ್ಷಿಗಳು ನೀರಿಗಾಗಿ ಪರದಾಟ ನಡೆಸುತ್ತಿರುವುದನ್ನು ಕಂಡು ಮಿಡಿದ ಪೊಲೀಸ್ ಹೃದಯ, ಹಳೇ ಪ್ಲಾಸ್ಟಿಕ್ ಬಕೆಟ್, ಬಾಟಲಿ, ಬ್ಯಾರೆಲ್‍ಗಳಲ್ಲಿ ನೀರು ತುಂಬಿಸಿ ಠಾಣೆ ವಠಾರದ ಹಳೇ ವಾಹನ, ಮರಗಳಲ್ಲಿ ತೂಗುಹಾಕುವ ಮೂಲಕ ನೀರುಣಿಸುವ ವ್ಯವಸ್ಥೆ ಮಾಡಿದ್ದಾರೆ. ಜತೆಗೆ ಬಾಯಾರಿಕೆಯಿಂದ ದಣಿವಾರಿಸಿಕೊಳ್ಳಲು ಬೀದಿನಾಯಿಗಳಿಗೂ ನೀರು ಒದಗಿಸುತ್ತಿದ್ದಾರೆ.
ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಹಿಂಭಾಗದಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಕಾರ್ಯಾಚರಿಸುತ್ತಿದ್ದು, ಈ ಪ್ರದೇಶದಲ್ಲಿ ಹಕ್ಕಿಗಳ ಕಲರವ ಹೆಚ್ಚಾಗಿದೆ. ನಾನಾ ಪ್ರಬೇದಗಳ ಪಕ್ಷಿಗಳು ನೀರು ಅರಸಿಕೊಂಡು ಠಾಣೆ ವಠಾರಕ್ಕೆ ಬರುತ್ತಿದೆ. ಜತೆಗೆ ಬೀದಿನಾಯಿಗಳೂ ನೀರು ಅರಸಿಕೊಂಡು ಪೊಲೀಸ್ ಠಾಣೆ ವಠಾರಕ್ಕೆ ಬಂದು ಸೇರುತ್ತಿದೆ. ನಳದಿಂದ ಹರಿಯುವ ನೀರನ್ನು ಸಂಗ್ರಹಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಪೊಲೀಸರ ಮೃದು ಹೃದಯದ ಸೇವೆ ಇಲ್ಲಿ ಅನಾವರಣಗಹೊಂಡಿದೆ. ಲಾಟಿ, ಬಂದೂಕು ಹಿಡಿಯುವ ಕೈಗಳು ಪ್ರಾಣಿ, ಪಕ್ಷಿಗಳಿಗಾಗಿಯೂ ಮಿಡಿಯುತ್ತಿದೆ ಎಂಬುದು ವಿದ್ಯಾನಗರ ಠಾಣೆ ಪೊಲೀಸರ ಈ ಮಾನವೀಯ ಸೇವೆಯಿಂದ ಸಾಬೀತಾಗಿದೆ.