ಕುಂಬಳೆ: ನಿಷ್ಕ್ರಿಯತೆ ಮತ್ತು ಅಹಂಕಾರಗಳು ಪ್ರಗತಿಗೆ ಹಾನಿಕಾರಕ. ಜನತೆಯ ಬೆಂಬಲ ಮತ್ತು ಭಗವಂತನ ಅನುಗ್ರಹ ಸಂಸ್ಥೆಯ ಬೆಳವಣಿಗೆಗೆ ನಿರಂತರವಾಗಿ ಬೇಕು. ಈ ಎರಡು ಚಕ್ರಗಳು ಸರಿಯಾಗಿದ್ದರೆ ಬದುಕಿನ ಬಂಡಿ ಸರಾಗವಾಗಿ ಚಲಿಸುತ್ತದೆ. ವ್ಯಕ್ತಿಗೆ ಎಪ್ಪತ್ತು ವರ್ಷ ತುಂಬಿದರೆ ಭಯ ಆವರಿಸಿಕೊಳ್ಳುತ್ತದೆ. ಆದರೆ ಸಂಸ್ಥೆಗೆ ಎಪ್ಪತ್ತು ತುಂಬಿದರೆ ನಿರ್ಭಯ, ಅದರಿಂದ ಯಾವ ಹಾನಿಯೂ ಇಲ್ಲ. ಅಂತಹ ಸಂಸ್ಥೆಗಳ ಮೇಲಿನ ವಿಶ್ವಾಸ ಹೆಚ್ಚುತ್ತದೆ ಮತ್ತು ಅವುಗಳು ಚಿರಂಜೀವಿಯಾಗಿ ಬೆಳಗುತ್ತವೆ. ಕೃಷ್ಣ ಪರಮಾತ್ಮನೇ ಹೇಳಿದಂತೆ, ದೇವ ಮತ್ತು ಮಾನವರ ಪರಸ್ಪರ ಸಹಕಾರದಿಂದ ಜಗತ್ತು ನಡೆಯುತ್ತದೆ. ಕರ್ತವ್ಯವನ್ನು ಪೂರೈಸುವುದೇ ನಮ್ಮ ಬದುಕಿನ ಯಜ್ಞವಾಗಬೇಕು. ಅರ್ಥ, ಕಾಮಗಳು ಧರ್ಮ, ಮೋಕ್ಷಗಳನ್ನು ಮೀರಬಾರದು. ಅರ್ಥ, ಕಾಮಗಳು ಧರ್ಮ ಮೋಕ್ಷಗಳನ್ನು ಮೀರಿದರೆ ಬದುಕಿನ ಲಯ ತಪ್ಪುತ್ತದೆ. ಕೃಷಿ, ಉತ್ಪಾದನೆ ಇತ್ಯಾದಿ ನಮ್ಮ ಕೆಲಸಕಾರ್ಯಗಳಿಂದ ನಾವು ವಿಮುಖರಾಗಿ ಮೈಗಳ್ಳರಾಗಬಾರದು. ನಮ್ಮ ನಮ್ಮ ಕರ್ತವ್ಯವನ್ನು ಪೂರೈಸುವುದೇ ಯಜ್ಞ. ಸುದೀರ್ಘಾವಧಿಯಿಂದ ಎಡನಾಡು ಮತ್ತು ಕಣ್ಣೂರು ಗ್ರಾಮಗಳಿಗೆ ಸೇವೆ ಸಲ್ಲಿಸುತ್ತಿರುವ ಈ ಬ್ಯಾಂಕು ಒಂದು ಅಣೆಕಟ್ಟಿನಂತೆ. ಗ್ರಾಮದ ಸಂಪನ್ಮೂಲವನ್ನು ಸಂಗ್ರಹಿಸಿ ಅದರ ಅಪೇಕ್ಷೆ ಇದ್ದವರಿಗೆ ನೀಡಿ ಗ್ರಾಮವು ಸ್ವಾವಲಂಬಿಯಾಗಿಯೇ ಇರುವಂತೆ ಮುಂದಿನ ದಿನಗಳಲ್ಲೂ ಕಾರ್ಯ ನಿರ್ವಹಿಸಲಿ ಎಂದು ಉಡುಪಿಯ ಶ್ರೀ ಪೇಜಾವರ ಅಧೋಕ್ಷಜ ಮಠದ ಪರಮಪೂಜ್ಯ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಆಶೀರ್ವದಿಸಿದರು.
ಅವರು ಗುರುವಾರ ಕುಂಬಳೆಗೆ ಸಮೀಪದ ಸೂರಂಬೈಲಿನಲ್ಲಿ ನಿರ್ಮಿಸಲಾದ ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕಿನ ನೂತನ ಕಟ್ಟಡ ಮತ್ತು ಭದ್ರತಾ ಕೊಠಡಿಯನ್ನು ಉದ್ಘಾಟಿಸಿ ಆಶೀರ್ವಚನ ನೀಡುತ್ತಿದ್ದರು.
ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಚ್. ಶಿವರಾಮ ಭಟ್ ಕಾರಿಂಜ ಹಳೆಮನೆ ಸಭೆಯ ಅಧ್ಯಕ್ಷತೆ ವಹಿಸಿದರು. ಇದೇ ಸಂದರ್ಭದಲ್ಲಿ ಸಮನ್ವಯ - ಸಹಕಾರಿ ಸಭಾಭವನದ ಉದ್ಘಾಟನೆಯನ್ನು ಕಾಸರಗೋಡಿನ ಸಹಕಾರಿ ಲೆಕ್ಕಪರಿಶೋಧನಾ ಜಂಟಿ ನಿರ್ದೇಶಕರಾದ ಜಾನ್ಸಿ ಕೆ.ಪಿ ನಿರ್ವಹಿಸಿದರು. ಬ್ಯಾಂಕಿನ ಸೌರ ಘಟಕದ ಉದ್ಘಾಟನೆಯನ್ನು ಮಂಜೇಶ್ವರ ವಿಭಾಗದ ಸಹಕಾರಿ ಸಹಾಯಕ ನಿಬಂಧಕರಾದ (ಸಾಮಾನ್ಯ) ರಾಜಗೋಪಾಲನ್. ಕೆ ನೆರವೇರಿಸಿದರು. ಸಹಕಾರಿ ಶಾಲಾ ಮಾರುಕಟ್ಟೆ ವಿಭಾಗವನ್ನು ಕಾಸರಗೋಡಿನ ಸಹಕಾರಿ ಸಹಾಯಕ ನಿಬಂಧಕರಾದ (ಲೆಕ್ಕ ಪರಿಶೋಧನೆ) ಪಿ.ಕೆ.ಬಾಲಕೃಷ್ಣನ್ ಉದ್ಘಾಟಿಸಿದರು. ನಬಾರ್ಡ್ ಸಂಸ್ಥೆಯ ಎಜಿಎಂ ಜ್ಯೋತಿಷ್ ಜಗನ್ನಾಥ್ ರೂಪೇ ಕಾರ್ಡು ವಿತರಣೆಯ ಉದ್ಘಾಟನೆಯನ್ನು ನೆರವೇರಿಸಿದರು.
ಮಂಜೇಶ್ವರ ವಿಭಾಗದ ಸಹಕಾರಿ ಪರಿಶೀಲನಾ ಅಧಿಕಾರಿ ಸುನಿಲ್ ಕುಮಾರ್, ಸಹಕಾರ ಭಾರತಿಯ ರಾಷ್ಟ್ರೀಯ ಕಾರ್ಯದರ್ಶಿ ಕರುಣಾಕರನ್ ನಂಬ್ಯಾರ್, ಕೆಸಿಇಎಫ್ ಸಂಸ್ಥೆಯ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ ವಿನೋದ್ ಕುಮಾರ್ ಪಿ.ಕೆ, ಎಡನಾಡು ಕ್ಷೀರೋತ್ಪಾದಕ ಸಹಕಾರಿ ಸಂಘದ ಅಧ್ಯಕ್ಷ ಶಂಕರನಾರಾಯಣ ರಾವ್, ಪುತ್ತಿಗೆ ಎಣ್ಮಕಜೆ ಅರ್ಬನ್ ಸಹಕಾರಿ ಸಂಘದ ಅಧ್ಯಕ್ಷ ರವೀಂದ್ರನಾಥ ನಾಯಕ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ಬ್ಯಾಂಕಿನ ಪೂರ್ವಾಧ್ಯಕ್ಷರುಗಳಾದ ಪಿ.ಜಿ.ಸುಬ್ರಹ್ಮಣ್ಯ ಹೆಬ್ಬಾರ್, ಎಸ್.ಗೋಪಾಲಕೃಷ್ಣ ಭಟ್, ಕೆ.ತಿರುಮಲೇಶ್ವರ ಭಟ್ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕ್ಲಪ್ತ ಸಮಯಕ್ಕೆ ವ್ಯವಸ್ಥಿತವಾದ ಕಟ್ಟಡವನ್ನು ನಿರ್ಮಿಸಿದ ಇಂಜಿನಿಯರ್ ಶಿವಶಂಕರ ಎಮ್.ಜಿ ಮತ್ತು ಗುತ್ತಿಗೆದಾರರಾದ ರಾಜು ಸ್ಟೀಫನ್‍ಡಿ*ಸೋಜ ಇವರನ್ನು ಗೌರವಿಸಲಾಯಿತು.
ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕಿನ ಕಾರ್ಯದರ್ಶಿ ಎ.ಕೃಷ್ಣ ಭಟ್ ವರದಿ ವಾಚಿಸಿದರು. ಬ್ಯಾಂಕಿನ ನಿರ್ದೇಶಕರಾದ ಪಿ.ಜಯಂತ ಪಾಟಾಳಿ ಸ್ವಾಗತಿಸಿ, ಎಚ್.ರಾಮ ಭಟ್ ವಂದಿಸಿದರು. ಬ್ಯಾಂಕಿನ ಸಿಬ್ಬಂದಿ ಶಶಿಧರ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಉಷಾ ಶಿವರಾಮ ಭಟ್, ಶ್ರೀಲತಾ ಹಳೆಮನೆ, ವಿನೋದಾ ಜಯಪ್ರಸಾದ ರೈ ಪ್ರಾರ್ಥಿಸಿದರು.