ತಿರುವನಂತಪುರ: ಕೇರಳದಲ್ಲಿ ಶೈಕ್ಷಣಿಕ ವರ್ಷಾರಂಭಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿಯಿದ್ದು, ಈ ಹಿನ್ನೆಲೆಯಲ್ಲಿ ಶಾಲಾ ಬಸ್‍ಗಳ ತಪಾಸಣೆ ನಡೆಸಿ ಭದ್ರತಾ ವ್ಯವಸ್ಥೆಗಳನ್ನು ಖಚಿತಪಡಿಸಬೇಕೆಂದು ರಾಜ್ಯ ಮೋಟಾರು ವಾಹನ ಇಲಾಖೆಯು ಆದೇಶ ನೀಡಿದೆ.
ಜೂನ್ 1ರ ಮುಂಚಿತವಾಗಿ ಎಲ್ಲ ಶಾಲಾ ವಾಹನಗಳನ್ನೂ ತಪಾಸಣೆ ನಡೆಸಬೇಕೆಂದು ಆರ್‍ಟಿಒ ಹಾಗೂ ಜೋಯಿಂಟ್ ಆರ್‍ಟಿಒಗಳಿಗೆ ತಿಳಿಸಲಾಗಿದೆ. ಈ ವರ್ಷದಿಂದ ಶಾಲಾ ಬಸ್‍ಗಳಲ್ಲಿ ಜಿಪಿಎಸ್ ಕಡ್ಡಾಯಗೊಳಿಸಲಾಗಿದೆ. ಶಾಲಾ ಬಸ್‍ಗಳಲ್ಲಿ ಜಿಪಿಎಸ್ ವ್ಯವಸ್ಥೆ ಏರ್ಪಡಿಸಲು ಕಳೆದ ವರ್ಷವೇ ನಿರ್ಧರಿಸಲಾಗಿತ್ತು. ಆದರೆ ಯೋಜನೆಯನ್ನು ಜಾರಿಗೊಳಿಸಲು ವಿಳಂಬವಾಗಿತ್ತು.
ಈ ಬಾರಿ ಮೋಟಾರು ವಾಹನ ಇಲಾಖೆಯ ಆದೇಶಗಳನ್ನು ಪಾಲಿಸದಿದ್ದರೆ ಬಸ್‍ಗಳನ್ನು ರಸ್ತೆಗಿಳಿಸಲು ಅನುಮತಿ ನೀಡುವುದಿಲ್ಲ ಎಂದು ಎಚ್ಚರಿಸಲಾಗಿದೆ. ಇದೇ ವೇಳೆ ಕೇಂದ್ರ ಸರಕಾರವು ಏಪ್ರಿಲ್ 1ರಂದು ಹೊರಡಿಸಿದ ವಿಜ್ಞಾಪನೆ ಹಾಗೂ ಆದೇಶಗಳನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ. ಎಲ್ಲ ವಾಹನಗಳಲ್ಲೂ ವೇಗ ನಿಯಂತ್ರಕಗಳನ್ನು ಅಳವಡಿಸಬೇಕೆಂಬುದು ಇದರಲ್ಲಿ ಪ್ರಮುಖವಾಗಿದೆ.
ವಾಹನಗಳನ್ನು ಚಾಲಕರು ತಪಾಸಣೆಗೆ ತಲುಪಿಸಿ ಪ್ರಮಾಣಪತ್ರ ಪಡೆದುಕೊಳ್ಳಬೇಕಾಗಿದೆ. ವಾಹನಗಳ ಟಯರ್‍ಗಳ ಕಾರ್ಯಕ್ಷಮತೆ, ಲೈಟ್‍ಗಳು, ವೈಪರ್ ಬ್ಲೇಡ್‍ಗಳು, ಎಮರ್ಜೆನ್ಸಿ ಡೋರ್‍ಗಳು, ಡೋರ್ ಹ್ಯಾಂಡಲ್‍ಗಳು, ಕರ್ಟನ್‍ಗಳು, ಸೀಟುಗಳು, ಕಲಿಕೋಪಕರಣಗಳನ್ನು ಇಡುವ ಸ್ಥಳ ಮೊದಲಾದವುಗಳನ್ನು ಪರಿಶೀಲಿಸಬೇಕೆಂದು ಆರ್‍ಟಿಒಗಳಿಗೆ ಆದೇಶ ನೀಡಲಾಗಿದೆ.
ಶಾಲಾ ಬಸ್‍ಗಳ ಚಾಲಕರಿಗೆ ಒಂದು ದಿನದ ತಿಳುವಳಿಕಾ ತರಗತಿಯನ್ನು ನೀಡಬೇಕಾಗಿದೆ. ತರಗತಿಯಲ್ಲಿ ಭಾಗವಹಿಸುವವರಿಗೆ ಮಾತ್ರವೇ ಶಾಲಾ ಬಸ್ ಚಲಾಯಿಸಲು ಅನುಮತಿ ನೀಡಲಾಗುವುದು. ಮಕ್ಕಳನ್ನು ಶಾಲೆಗೆ ತಲುಪಿಸುವ ಗುತ್ತಿಗೆ ವಾಹನಗಳಲ್ಲಿ `ಓನ್ ಸ್ಕೂಲ್ ಡ್ಯೂಟಿ' ಎಂದು ಬರೆಯಬೇಕೆಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.