ಉಪ್ಪಳ:ಜಿಲ್ಲೆಯ ಯುವಕರಿಗೆ ಸೈನ್ಯಕ್ಕೆ ಸೇರುವ ಅವಕಾಶವನ್ನು ಕಲ್ಪಿಸಿ ಕೊಡುವ ಉದ್ದೇಶದಿಂದ ಅವೇಕ್ ಕಾಸರಗೋಡು ಟ್ರಸ್ಟ್ ಮತ್ತು ಸದ್ಗುರು ಶ್ರೀ ನಿತ್ಯಾನಂದ ಚಾರಿಟೇಬಲ್ ಟ್ರಸ್ಟ್ ಕೊಂಡೆವೂರು ಸಹಯೋಗದಲ್ಲಿ ಉಪ್ಪಳ ಕೊಂಡೆವೂರು ಶ್ರೀ ಆಶ್ರಮದಲ್ಲಿ ಮೇ ತಿಂಗಳ 15 ರಿಂದ ಜೂನ್ ತಿಂಗಳ 15ರವರೆಗೆ ನಡೆಯುವ ಡಿಫೆನ್ಸ್ ಪ್ರಿ ರಿಕ್ರೂಟ್ಮೆಂಟ್ ಟ್ರೈನಿಂಗ್ ಶಿಬಿರದ ದಾಖಲಾತಿ ಮತ್ತು ಸ್ಕ್ರೀನಿಂಗ್ ಪರೀಕ್ಷೆ ಗುರುವಾರ ನಡೆಯಿತು.ಕೊಂಡೆವೂರು ಯೋಗ ಆಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನೇಕ ಯುವಕರು ಪಾಲ್ಗೊಂಡರು.
ಈ ವೇಳೆ ನಡೆದ ಸಮಾರಂಭದಲ್ಲಿ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಶ್ರೀಗಳು ಮಾತನಾಡಿ, ರಾಷ್ಟ್ರ ನಿರ್ಮಾಣದಲ್ಲಿ ಪ್ರಧಾನ ಪಾತ್ರವಹಿಸುವ ಯುವ ಜನಾಂಗ ರಾಷ್ಟ್ರ ರಕ್ಷಣೆ, ಸಮೃದ್ದ ನೆಮ್ಮದಿಯ ಗಡಿ ರಕ್ಷಣೆಯ ಬಗೆಗೂ ಕಟಿಬದ್ದತೆ ಪ್ರದರ್ಶಿಸಬೇಕು. ಈ ನಿಟ್ಟಿನಲ್ಲಿ ಸಮರ್ಪಕ ಮಾರ್ಗದರ್ಶನ, ತರಬೇತಿಗಳ ಅಗತ್ಯವಿದ್ದು, ಗಡಿನಾಡಿನ ಜನರಿಗೆ ಈ ನಿಟ್ಟಿನ ಅರಿವಿನ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಅವೇಕ್ ಸಂಯೋಜಿಸುತ್ತಿರುವ ಸೇನಾ ತರಬೇತಿ, ಮಾರ್ಗದರ್ಶನ ಶ್ಲಾಘನೀಯ ಎಂದು ತಿಳಿಸಿದರು.
ಅವೇಕ್ ಕಾಸರಗೋಡು ಇದರ ಅಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ, ಆಸಕ್ತ ಯುವಕರಿಗೆ ಅವೇಕ್ ಮೂಲಕ ಸಂಪೂಣ್ ಉಚಿತ ತರಬೇತಿ ಮಾರ್ಗದರ್ಶನ ನೀಡಲಾಗುವುದು. ಯುವ ಸಮೂಹ ತುಂಬು ಆಸಕ್ತಿಯಿಂದ ಭಾಗವಹಿಸಿ ಬದುಕು ಮತ್ತು ರಾಷ್ಟ್ರವನ್ನು ಸಂರಕ್ಷಿಸುವ ಉದಾತ್ತತೆಗೆ ಮನಮಾಡಬೇಕು ಎಂದು ಕರೆನೀಡಿದರು.
ಅವೇಕ್ ಉಪಾಧ್ಯಕ್ಷ ಹರೀಶ್ ಕುಮಾರ್, ಸಮಾಜಸೇವಕ ಸುಧಾಮ ಗೋಸಾಡ, ಸುರೇಶ್ ಕುಮಾರ್ ಶೆಟ್ಟಿ, ಅವೇಕ್ ಕಾಸರಗೋಡು ಸದಸ್ಯರುಗಳಾದ ನಿಖಿಲ್, ನಿಖಿಲೇಶ್, ಹರೀಶ್ ಕುಮಾರ್, ಕೆ ಜಿ ಮನೋಹರ್, ದಿನೇಶ್ ಎಂ.ಟಿ ಉಪಸ್ಥಿತರಿದ್ದರು. ಅವೇಕ್ ಕಾಸರಗೋಡು ಕಾರ್ಯದರ್ಶಿ ಕೆ ಗುರುಪ್ರಸಾದ್ ಪ್ರಭು ಸ್ವಾಗತಿಸಿ, ಹರೀಶ್ ಕುಮಾರ್ ವಂದಿಸಿದರು. ಕಾರ್ಯಕ್ರಮದಲ್ಲಿ ಐದು ನೂರಕ್ಕೂ ಮೇಲ್ಪಟ್ಟು ಆಸಕ್ತ ಯುವಕರು ದಾಖಲಾತಿ ನಡೆಸಿ ಭರವಸೆಗೆ ಕಾರಣರಾದರು.