ಬದಿಯಡ್ಕ: ಜಗದ್ಗುರುಶಂಕರಾಚಾರ್ಯ ಮಹಾಸಂಸ್ಥಾನಮ್ ಶ್ರೀಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರಮಠ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಕಾರ್ಯಾಚರಿಸುತ್ತಿರುವ ವಿವಿಧ ಸಮಾಜಮುಖೀ ಯೋಜನೆಗಳಲ್ಲಿ ಒಂದಾದ ಕಾಮದುಘಾ ವಿಭಾಗದನ್ವಯ ಕಾರ್ಯವೆಸಗುತ್ತಿರುವ ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ನಿರಂತರ ಆಹಾರ ವ್ಯವಸ್ಥೆಯನ್ನು ಪೂರೈಸುವ ಯೋಜನೆಯ ಅಂಗವಾಗಿ ಜೂನ್ 8 ರಂದು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ "ಹಲಸು ಬೆಳೆಸಿ ಗೋವು ಉಳಿಸಿ" ಎಂಬ ಧ್ಯೇಯ ವಾಕ್ಯದೊಂದಿಗೆ ಜರಗಲಿರುವ " ಹಲಸು ಮೇಳ " ಎಂಬ ವಿಶೇಷ ಸಮಾರಂಭದ ಯಶಸ್ವಿಗಾಗಿ ಸಿದ್ಧತಾ ಸಮಾಲೋಚನಾ ಸಭೆಯು ಬದಿಯಡ್ಕ ಬೋಳುಕಟ್ಟೆಯಲ್ಲಿರುವ ಶ್ಯಾಮ್ ಭಟ್ ಬೇರ್ಕಡವು ಇವರ ಸೀತಾಲಕ್ಷ್ಮೀ ನಿವಾಸದಲ್ಲಿ ಬುಧವಾರ ನಡೆಯಿತು.
ಸಮಾರಂಭವು ಮುಳ್ಳೇರಿಯಾ ಹವ್ಯಕ ಮಂಡಲ, ಅಮೃತಧಾರಾ ಗೋಶಾಲೆ ಬಜಕ್ಕೂಡ್ಲು ಪೆರ್ಲ, ಮತ್ತು ಮಹಿಳೋದಯ ಬದಿಯಡ್ಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರಗಲಿದೆ. ಹಲಸುಮೇಳದ ಗಳಿಕೆಯ ಲಾಭಾಂಶವನ್ನು ಬಜಕೂಡ್ಲು ಗೋಶಾಲೆಯ ಗೋವುಗಳ ಮೇವಿಗಾಗಿ ಬಳಸಲಾಗುವುದು.
ಶಂಖನಾದವಾಗಿ ಗುರುವಂದನೆಯೊಂದಿಗೆಚ ಆರಂಭಗೊಂಡ ಸಭೆಯಲ್ಲಿ ಪ್ರೊ. ಶ್ರೀಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಶಿವಪ್ರಸಾದ ವರ್ಮುಡಿ ಪ್ರಾಸ್ತಾವಿಕಮಾತುಗಳನ್ನಾಡಿ ಸಮಾರಂಭವನ್ನು ಯಶಸ್ವಿಯಾಗಿ ನಡೆಸುವ ಬಗ್ಗೆ ಮಾಹಿತಿಗಳನ್ನಿತ್ತರು.
ಹವ್ಯಕ ಮಹಾ ಮಂಡಲಾಧ್ಯಕ್ಷೆ ಈಶ್ವರೀ ಬೇರ್ಕಡವು ಸಭಾ ಸಂಯೋಜನೆ ಮಾಡಿದರು. ಮಂಡಲ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ ಸಾಂದರ್ಭಿಕ ಮಾತುಗಳನ್ನಾಡಿ ವಿವಿಧ ವಲಯಗಳ ಜವಾಬ್ದಾರಿಯ ಬಗ್ಗೆ ಸಲಹೆಗಳನ್ನಿತ್ತರು. ಡಾ ವೈ ವಿ ಕೃಷ್ಣಮೂರ್ತಿ ಸಮಾರಂಭದ ಸಿದ್ಧತೆಗಳ ಬಗ್ಗೆ ವಿವರಣೆಗಳನ್ನಿತ್ತರು.
ಮೇಳದಲ್ಲಿ ವಿಶೇಷವಾಗಿ ಬಹೂಪಯೋಗಿ ಹಲಸಿನ ಪ್ರಯೋಜನಗಳ ಬಗ್ಗೆ ಮಾಹಿತಿ, ತರಬೇತಿ, ಹಲಸು ಮಂಚೂರಿ, ನೂಡಲ್ಸ್, ಐಸ್ಕ್ರೀಮ್, ಬೇಳೆ ಬಿಸ್ಕಟ್, ಬನ್ಸ್ ಮೊದಲಾದ ಆಧುನಿಕ ಹಾಗೂ ಪರಂಪರೆಯ ಹಲಸು ತಿನಿಸುಗಳೇ ಮೊದಲಾದ ನೂರಕ್ಕೂ ಹೆಚ್ಚಿನ ಸಿದ್ಧ ಮತ್ತು ಪ್ರತ್ಯಕ್ಷ ತಯಾರೀ ಉತ್ಪನ್ನಗಳು, ವಿವಿಧ ತಳಿಯ ಹಲಸು ಸಸ್ಯಗಳು, ಯಂತ್ರೋಪಕರಣಗಳು ಇವುಗಳ ಪ್ರದರ್ಶಿನಿ ಮಾರಾಟ ವ್ಯವಸ್ಥೆಗೊಳಿಸಲು ತೀರ್ಮಾನಿಸಲಾಯಿತು.
ಕೊಡಗಿನಿಂದ ಆರಂಭವಾಗಿ ಕಾಸರಗೋಡಿನ ತನಕ ಮುಳ್ಳೇರಿಯಾ ಹವ್ಯಕ ಮಂಡಲದ ವಿವಿಧ ವಲಯಗಳ ಹಲಸು ತಿನಿಸುಗಳು ಮೇಳದಲ್ಲಿ ಲಭ್ಯವಿರುವುದು ಗಮನಾರ್ಹ ವಿಚಾರವಾಗಿದೆ.
ಮಂಡಲ ಮಾತೃ ಪ್ರಧಾನೆ ಕುಸುಮಾ ಪೆರ್ಮುಖ, ದೇವಕಿ ಪನ್ನೆ, ಕೇಶಪ್ರಸಾದ ಎಡಕ್ಕಾನ, ಗೋವಿಂದ ಬಳ್ಳಮೂಲೆ ಮತ್ತು ವಿವಿಧ ವಲಯ ಪದಾಧಿಕಾರಿಗಳು, ಮಹಿಳೋದಯ ಪದಾಧಿಕಾರಿಗಳು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು. ಕೇಶವ ಪ್ರಸಾದ ಎಡಕ್ಕಾನ ವಂದಿಸಿದರು.