ಕಾಸರಗೋಡು: ಮತಗಣನೆಗೆ ನಿಯುಕ್ತರಾಗಿರುವ ಸಿಬ್ಬಂದಿಗೆ ಆಹಾರ ವಿತರಣೆಯ ಹೊಣೆಗಾರಿಕೆಯನ್ನು ಕುಟುಂಬಶ್ರೀ ಜಿಲ್ಲಾ ಮಿಷನ್ ವಹಿಸಿಕೊಂಡಿದೆ.
ಪಡನ್ನಕ್ಕಾಡ್ ನೆಹರೂ ಆಟ್ರ್ಸ್ ಆಂಡ್ ಸಯನ್ಸ್ ಕಾಲೇಜಿನಲ್ಲಿ ನಾಳೆ(ಮೇ 23) ನಡೆಯಲಿರುವ ಲೋಕಸಭೆ ಚುನಾವಣೆಯ ಮತಗಣನೆಗೆ ನೇಮಕಗೊಂಡಿರುವ ಸಿಬ್ಬಂದಿಗೆ ಹೊತ್ತು ಹೊತ್ತಿನ ಭೋಜನ, ನೀರು ಇತ್ಯಾದಿಗಳನ್ನು ಕುಟುಂಬಶ್ರೀ ವಿತರಣೆ ನಡೆಸಲಿದೆ.
ಬೆಳಿಗ್ಗೆ 6 ಗಂಟೆಗೆ ಚಹಾ, ಉಪಹಾರ, 11 ಗಂಟೆಗೆ ಬಿಸ್ಕೆಟ್, ಚಹಾ, ಮಧ್ಯಾಹ್ನ 12 ಗಂಟೆಗೆ ಭೋಜನ ಇತ್ಯಾದಿಗಳನ್ನು ಮತಗಣನೆಯ ಕೇಂದ್ರದಲ್ಲಿ ನೀಡಲಾಗುವುದು. ಮತಗಣನೆ ಕೇಂದ್ರದ ಹೊರಬದಿಯಲ್ಲಿ ಸಜ್ಜುಗೊಳಿಸಿರುವ ಕೌಂಟರ್ ಗಳಲ್ಲಿ ಕುಟುಂಬಶ್ರೀ ಆಹಾರ ವಿತರಣೆ ನಡೆಸಲಿದೆ. ಬೆಳಿಗ್ಗಿನ ಉಪಹಾರಕ್ಕೆ 40 ರೂ., ಮಧ್ಯಾಹ್ನದ ಭೋಜನಕ್ಕೆ 60 ರೂ. ಬೆಲೆ ನಿಗದಿ ಪಡಿಸಲಾಗಿದ್ದು, ಈ ಮೌಲ್ಯದ ಕೂಪನ್ ಗಳನ್ನು ಸಿಬ್ಬಂದಿಗೆ ನೀಡಲಾಗಿದೆ.
ಬೆಳಿಗ್ಗಿನ ಉಪಹಾರದಲ್ಲಿ ಇಡ್ಲಿ-ಚಟ್ನಿ-ಸಾಂಬಾರ್, ವೆಳ್ಳಪ್ಪಂ-ಕಡಲೆ ಕರಿ, ಉಪ್ ಮಾ(ಉಪ್ಪಿಟ್ಟು), ಬಾಳೆಹಣ್ಣು ಚಹಾ ಇರುವುದು. ಮಧ್ಯಾಹ್ನದ ಭೋಜನದಲ್ಲಿ ತುಪ್ಪ ಅನ್ನ-ಚಿಕ್ಕನ್ ಕರಿ, ಅನ್ನ-ತರಕಾರಿ ಸಾಂಬಾರ್ ಇರುವುದು. ಕುಟುಂಬಶ್ರೀ ವ್ಯಾಪ್ತಿಯ ಮೂರು ಕ್ಯಾಟರಿಂಗ್ ಸರ್ವೀಸ್ ಗಳ ಮೂಲಕ ಆಹಾರ ತಯಾರಿ ಮತ್ತು ವಿತರಣೆ ನಡೆಯಲಿದೆ. ಆಹಾರ ವಿತರಣೆಗೆ ಕಾಞÂಂಗಾಡ್ ನಗರಸಭೆಯ ಸಿ.ಡಿಎಸ್. ಕುಟುಂಬಶ್ರೀ ಕಾರ್ಯಕರ್ತರು ಸಹಾಯ ನೀಡಲಿದ್ದಾರೆ.
ಏ.23 ರಂದು ನಡೆದ ಮತದಾನದ ದಿನ ಮತ್ತು ಹಿಂದಿನ ದಿನ ನಿಯುಕ್ತ ಸಿಬ್ಬಂದಿಗೆ ಹೊತ್ತುಹೊತ್ತಿನ ಆಹಾರ-ನೀರು ವಿತರಣೆ ನಡೆಸುವ ವಿಚಾರದಲ್ಲಿ ಕುಟುಂಬಶ್ರೀಯ ಚಟುವಟಿಕೆ ಪ್ರಶಂಸನೀಯವಾಗಿತ್ತು.
(ಚಿತ್ರ ಮಾಹಿತಿ: ಏ.23 ರಂದು ನಡೆದ ಚುನಾವಣೆಯ ದಿನದಂದು ಮಂಗಲ್ಪಾಡಿ ಶಾಲೆಯಲ್ಲಿ ಕುಟುಂಬಶ್ರೀ ಕಾರ್ಯಕರ್ತರಿಂದ ಚುನಾವಣಾ ಸಿಬ್ಬಂದಿಗಳಿಗೆ ಆಹಾರ ತಯಾರಿಯ ಅಪರೂಪದ ಪೋಟೋ.)