ಕಾಸರಗೋಡು: ರಂಗಭೂಮಿ ಕ್ಷೇತ್ರದ ಮಹಾಸಾಧಕ ಸುಮಾರು ಏಳು ದಶಕಗಳ ಕಾಲ ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ಮಿಂಚಿದ ಮಹಾನಟ ಮಾಸ್ಟರ್ ಹಿರಣ್ಣಯ್ಯ ಅವರು ನಮ್ಮನ್ನು ಅಗಲಿದ್ದಾರೆ. ಅವರಿಗೂ ಕಾಸರಗೋಡಿಗೂ ಅವಿನಾಭಾವ ಸಂಬಂಧವಿದೆ. ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರನ್ನು ಸ್ಮರಿಸುವ ಕಾರ್ಯಕ್ರಮವು ಮೇ 4 ರಂದು ಸಂಜೆ ಐದು ಗಂಟೆಗೆ ಪಾರೆಕಟ್ಟೆ ರಂಗಕುಟೀರ ಸಭಾಂಗಣದಲ್ಲಿ ನಡೆಯಲಿದ್ದು, ಕನ್ನಡಾಭಿಮಾನಿಗಳು ಭಾಗವಹಿಸಬೇಕೆಂದು ವಿನಂತಿಸಲಾಗಿದೆ.
ಅಪೂರ್ವ ಕಲಾವಿದರು ಸಂಸ್ಥೆಯು 2009 ರಲ್ಲಿ ಕರ್ನಾಟಕದ ನೆರೆಸಂತ್ರಸ್ತರ ಕಣ್ಣೀರೊರೆಸಲು `ಮಳೆ ನಿಂತ ಮೇಲೆ' ಎಂಬ ಬೀದಿ ನಾಟಕವನ್ನು ಕಾಸರಗೋಡಿನ ವಿವಿಧ ಪ್ರದೇಶಗಳಲ್ಲಿ, ಮಂಗಳೂರು, ಮಡಿಕೇರಿ, ಮೈಸೂರು ಹಾಗೂ ಬೆಂಗಳೂರಿನಲ್ಲಿ ಪ್ರದರ್ಶನ ಮಾಡಿ ಕರ್ನಾಟಕದ ನೆರೆ ಸಂತ್ರಸ್ತರಿಗೆ ಅರ್ಧಲಕ್ಷಕ್ಕಿಂತಲೂ ಮಿಕ್ಕಿ ಸಹಾಯಧನವೊದಗಿಸಿತ್ತು. ಜತೆಗೆ ನೆರೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿತ್ತು.
ಬೆಂಗಳೂರಿನಲ್ಲಿ ನಡೆದ ನಾಟಕ ಪ್ರದರ್ಶನವನ್ನು ನೋಡಿ ಹಾಗೂ ಗಡಿನಾಡಿನ ಈ ಸಾಂದರ್ಭಿಕ ಔಚಿತ್ಯಪೂರ್ಣ ಸಕಾಲಿಕ ಸ್ಪಂದನೆಯನ್ನು ಪ್ರತ್ಯಕ್ಷ ಕಂಡ ಮಾಸ್ಟರ್ ಹಿರಣ್ಣಯ್ಯ ಅವರು ಅಪೂರ್ವ ಸಂಸ್ಥೆಯನ್ನು, ನಾಟಕ ನಿರ್ದೇಶನ ಮಾಡಿದ ಹಿರಿಯ ರಂಗನಿರ್ದೇಶಕ ಉಮೇಶ್ ಸಾಲಿಯಾನ್, ನಾಟಕ ಬರೆದ ಡಾ|ರತ್ನಾಕರ ಮಲ್ಲಮೂಲೆ ಹಾಗೂ ನಾಟಕದ ಮುಖ್ಯಪಾತ್ರ ನಿರ್ವಹಿಸಿದ ಸುನಿತಾ ಎಕ್ಕೂರು, ಕಿರಣ್ ರಾಜ್ ಕೆ, ಕಲಾಂಜಲಿ ಈ ಮುಂತಾದವರನ್ನು ಮಾಸ್ಟರ್ ಹಿರಣ್ಣಯ್ಯ ವಿಶೇಷವಾಗಿ ಅಭಿನಂದಿಸಿ ಕಾಸರಗೋಡಿನ ಕಲಾವಿದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದ್ದರು.
ಕಾಸರಗೋಡಿನ ರಂಗಭೂಮಿ ಹಾಗೂ ಇಲ್ಲಿನ ಕಲಾವಿದರ ಮೇಲೆ ವಿಶೇಷ ಪ್ರೀತಿ ಅಭಿಮಾನ ಇರುವ ಹಿರಣ್ಣಯ್ಯ ಅವರನ್ನು ಸ್ಮರಿಸುವ ನಿಟ್ಟಿನಲ್ಲಿ ಮೇ 4 ಶನಿವಾರ ಸಂಜೆ 5 ಗಂಟೆಗೆ ಪಾರೆಕಟ್ಟೆ ರಂಗ ಕುಟೀರದಲ್ಲಿ ನಡೆಯುವ ಮಾಸ್ಟರ್ ಹಿರಣ್ಣಯ್ಯ ಶ್ರದ್ಧಾಂಜಲಿ ಹಾಗೂ ಸಂಸ್ಮರಣೆ ಕಾರ್ಯಕ್ರಮದಲ್ಲಿ ಸಾಹಿತ್ಯಾಭಿಮಾನಿಗಳು, ಕಲಾಭಿಮಾನಿಗಳು ಭಾಗವಹಿಸಬೇಕೆಂದು ಅಪೂರ್ವ ಕಲಾವಿದರು ಅಧ್ಯಕ್ಷ ಉಮೇಶ್ ಸಾಲಿಯಾನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.