ನವದೆಹಲಿ: ಸತತ ಎರಡನೇ ಅವಧಿಗೆ ಪ್ರಧಾನಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರು ತಮ್ಮ ಮೊದಲ ಸಂಪುಟ ಸಭೆಯಲ್ಲಿ ರೈತರಿಗೆ ಮತ್ತು ವ್ಯಾಪಾರಸ್ಥರಿಗೆ ಭರ್ಜರಿ ಕೊಡುಗೆ ನೀಡಿದ್ದಾರೆ.
ಈ ಹಿಂದೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವಾರ್ಷಿಕ 6,000 ರೂ. ಸಹಾಯಧನ ನೀಡುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಇದೀಗ ಎಲ್ಲಾ ರೈತರಿಗೂ ವಿಸ್ತರಣೆ ಮಾಡಲು ಮೋದಿ ನೇತೃತ್ವದ ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ.
ಇದರಿಂದ ದೇಶದ ಸುಮಾರು 15 ಕೋಟಿ ರೈತರಿಗೆ ಅನುಕೂಲವಾಗಲಿದ್ದು, ಒಟ್ಟು ಮೂರು ಕಂತುಗಳಲ್ಲಿ ವಾರ್ಷಿಕ 6,000 ರೂ ಸಹಾಯಧನ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕೇಂದ್ರದ ಈ ನಿರ್ಧಾರದಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 87,217.50 ಕೋಟಿ ರೂ. ಹೊರೆ ಬೀಳಲಿದ್ದು, ರೈತರ ಆರ್ಥಿಕ ಸ್ಥಿತಿ ಸುಧಾರಿಸುವ ತನ್ನ ವಾಗ್ದಾನಕ್ಕೆ ಬದ್ಧ ಎಂಬ ಸಂದೇಶವನ್ನು ಮೋದಿ ಸರ್ಕಾರ ರವಾನಿಸಿದೆ.
ಇದೇ ವೇಳೆ ಪಿಎಂ-ಕಿಸಾನ್ ಪೆನ್ಷನ್ ಯೋಜನೆ(ಎಸ್‍ಎಂಎಫ್)ಗೂ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಈ ಯೋಜನೆ ಸಂಪೂರ್ಣ ಐಚ್ಛಿಕವಾಗಿದ್ದು, ದೇಶದ ಎಲ್ಲ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪಿಂಚಣಿ ನೀಡುವ ಯೋಜನೆ ಇದಾಗಿದೆ.
ವ್ಯಾಪಾರಸ್ಥರಿಗೂ ಪಿಂಚಣಿ ಯೋಜನೆ ಘೋಷಿಸಿರುವ ಮೋದಿ ಸರ್ಕಾರ, ದೇಶದ ಸುಮಾರು 3 ಕೋಟಿ ಚಿಲ್ಲರೆ ವ್ಯಾಪಾರಿಗಳಿಗೆ ಭರ್ಜರಿ ಕೊಡುಗೆ ನೀಡಿದೆ.