ಕೊಲ್ಲಂ: ಕೊಲ್ಲಂ ಜಿಲ್ಲೆಯ ಮುಂಡಕಲ್ ನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೋರ್ವ ತನ್ನ ಕಾರಿನ ಹಿಂಭಾಗದಲ್ಲಿ ಉಗ್ರ ಒಸಾಮ ಬಿನ್ ಲ್ಯಾಡೆನ್ ಸ್ಟಿಕರ್ ಅಂಟಿಸಿದ್ದ ಘಟನೆ ಬೆಳಕಿಗೆ ಬಂದಿದೆ.
ಎಂಎಸ್ ಎನ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಮುಹಮ್ಮದ್ ಹನೀಫ್ (22) ಕಾರಿನ ಹಿಂಭಾಗದಲ್ಲಿ ಉಗ್ರ ಬಿನ್ ಲ್ಯಾಡೆನ್ ಸ್ಟಿಕರ್ ಅಂಟಿಸಿರುವ ಯುವಕನಾಗಿದ್ದು, ಪೊಲೀಸರು ಈತನ ಕಾರನ್ನು ವಶಕ್ಕೆ ಪಡೆದಿದ್ದಾರೆ.
ಕಾರಿನ ಪಕ್ಕದಲ್ಲೇ ತೆರಳಿದ ವ್ಯಕ್ತಿಯೋರ್ವರು ಈಚಿತ್ರವನ್ನು ಫೋನ್ ನಲ್ಲಿ ಸೆರೆ ಹಿಡಿದ್ದಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಈ ವೇಳೆ ಕಾರಿನಲ್ಲಿ ಚಾಲಕ ಸೇರಿ 3 ಜನ ಸಂಚರಿಸುತ್ತಿದ್ದರು. ಕಾರಿನ ಚಾಲಕನನ್ನು ಹರೀಶ್ ಎಂದು ಗುರುತಿಸಲಾಗಿದೆ.
ಚಾಲಕ ಹರೀಶ್ ಮದುವೆ ಕಾರ್ಯಕ್ರಮಕ್ಕಾಗಿ ಹನೀಫ್ ನಿಂದ ಕಾರನ್ನು ಪಡೆದುಕೊಂಡಿದ್ದ, ಈ ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಕಾರಿನ ಮಾಲಿಕ ಹನೀಫ್ ನನ್ನು ವಿಚಾರಣೆಗೊಳಪಡಿಸಿದ್ದಾರೆ. ತಾನು ಮೋಜಿಗಾಗಿ ಈ ರೀತಿ ಸ್ಟಿಕರ್ ಅಂಟಿಸಿರುವುದಾಗಿ ಹನೀಫ್ ಹೇಳಿಕೆ ನೀಡಿದ್ದಾನೆ.
ಪಶ್ಚಿಮ ಬಂಗಾಳದ ನೋಂದಣಿ ಹೊಂದಿರುವ ಹೋಂಡಾ ಅಕಾರ್ಡ್ ಕಾರನ್ನು ಹನೀಫ್ ಬೆಂಗಳೂರಿನ ಸ್ನೇಹಿತನಿಂದ 4.5 ಲಕ್ಷ ರೂಪಾಯಿ ಕೊಟ್ಟು ಒಂದು ವರ್ಷದ ಹಿಂದೆ ಖರೀದಿಸಿದ್ದಾಗಿ ಹೇಳಿದ್ದಾನೆ. ಕಾರಿನ ಮಾಲಿಕರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.