ಕಾಸರಗೋಡು: ರಾಜ್ಯ ಸರಕಾರದ ನೇತೃತ್ವದಲ್ಲಿ ಶನಿವಾರ ಹಾಗೂ ಭಾನುವಾರಗಳಂದು ನಡೆದ ಸಂಪೂರ್ಣ ಶುಚೀಕರಣ ಯಜ್ಞ ಯೋಜನೆ ಭಾರೀ ಯಶಸ್ಸಿನೊಂದಿಗೆ ಮುನ್ನಡೆದಿದೆ ಎಂದು ಅಧಿಕೃತರು ಬೆನ್ನುತಟ್ಟುತ್ತಿರುವ ಮಧ್ಯೆ ರಾಷ್ಟ್ರೀಯ ಹೆದ್ದಾರಿ ಅಡ್ಕತ್ತಬೈಲಿನಲ್ಲಿ ರಸ್ತೆ ಬದಿಯಲ್ಲಿ ಶುಚೀಕರಿಸಿ ಸಂಗ್ರಹಿಸಲಾದ ಮಾಲಿನ್ಯಗಳನ್ನು ಗೋಣಿ ಚೀಲಗಳಲ್ಲಿ ಎಸೆದಿರುವ ದೃಶ್ಯ ಸೋಮವಾರ ಕಂಡುಬಂದಿದೆ.
ಲಕ್ಷಾಂತರ ರೂ.ವ್ಯಯಿಸಿ ಭಾರೀ ಪ್ರಚಾರ ನಡೆಸಿದ ಶುಚೀಕರಣ ಪ್ರಕ್ರಿಯೆಯ ಅಣಕವೆಂಬಂತೆ ಹೆದ್ದಾರಿಯ ಈ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲೂ ಸದ್ದು ಮಾಡಿದ್ದು, ಅಧಿಕೃತರು ಕಠಿಣ ನಿಲುವು ತಳೆಯದ ಹೊರತು ಉದ್ದೇಶಿತ ಯೋಜನೆ ಗುರಿ ಮುಟ್ಟದೆಂಬುದು ಸಾಬೀತಾಗಿದೆ. ಈ ಬಗ್ಗೆ ಜಿಲ್ಲಾ ಶುಚಿತ್ವ ಮಿಷನ್ ಅಧಿಕೃತರನ್ನು ಸಂಪರ್ಕಿಸಿದಾಗ ಎಸೆಯಲಾದ ಮಾಲಿನ್ಯದ ಚೀಲಗಳನ್ನು ವಿಲೇವಾರಿ ಮಾಡಲಾಗುವುದು ಮತ್ತು ಸಾರ್ವಜನಿಕವಾಗಿ ಮಾಲಿನ್ಯ ಎಸೆಯುವವರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.