ಕುಂಬಳೆ: ಶೈಕ್ಷಣಿಕ ಕ್ಷೇತ್ರದಲ್ಲಿ ಸಮರ್ಪಣಾ ಮನೋಭಾವದಿಂದ ಅಹರ್ನಿಶಿ ದುಡಿದ ಭಾಸ್ಕರನ್ ಮಾಸ್ತರ್ ಅವರ ವ್ಯಕ್ತಿತ್ವ ಶಿಕ್ಷಕ ವೃಂದಕ್ಕೆ ಮಾದರಿಯಾದುದು. ಆದ್ದರಿಂದ ಅವರು ಅಧ್ಯಾಪಕರಿಗೆ ರಿಯಲ್ ಮೋಡೆಲ್ ಎಂದು ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ನಂದಿಕೇಶನ್ ಎನ್. ಹೇಳಿದರು.
ಅವರು ಈ ಶೆಕ್ಷಣಿಕ ವರ್ಷ ಸೇವೆಯಿಂದ ನಿವೃತ್ತರಾಗುವ ಮಾಯಿಪ್ಪಾಡಿ ಡಯಟ್ (ಶಿಕ್ಷಕ ಶಿಕ್ಷಣ ತರಬೇತಿ ಕೇಂದ್ರ)ನ ಹಿರಿಯ ಪ್ರಾಧ್ಯಾಪಕ ಡಾ.ಪಿ.ಭಾಸ್ಕರನ್ ಅವರನ್ನು ಶಾಲು ಹೊದಿಸಿ, ಫಲ ಪುಷ್ಪ ನೀಡಿ ಸಮ್ಮಾನಿಸಿ ಮಾತನಾಡಿದರು.
ರಜಾ ಕಾಲದ ತರಬೇತಿ ಶಿಬಿರದಲ್ಲಿ ಪಾಲ್ಗೊಂಡ ಕನ್ನಡ ಮಾಧ್ಯಮ ಅಧ್ಯಾಪಕರ ವತಿಯಿಂದ ಇತ್ತೀಚೆಗೆ ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಶಾಲಾಮುಖ್ಯ ಶಿಕ್ಷಕಿ ಉದಯಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಬ್ಲಾಕ್ ಯೋಜನಾಧಿಕಾರಿ ಉಣ್ಣಿಕೃಷ್ಣನ್ ಅವರು ಭಾಸ್ಕರನ್ ಅವರಿಗೆ ಸ್ಮರಣಿಕೆ ನೀಡಿ ಶುಭ ಹಾರೈಸಿದರು.
ಆದೂರು ಶಾಲಾ ಮುಖ್ಯಶಿಕ್ಷಕ ರಾಮಣ್ಣ ಮಾಸ್ತರ್ ಅಭಿನಂದನಾ ಭಾಷಣ ಮಾಡಿದರು. ಸಮ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಭಾಸ್ಕರನ್ ಕನ್ನಡ ಶಿಕ್ಷಕರ ಜೊತೆಗಿರುವ ತಮ್ಮ ಆತ್ಮಬಂಧವನ್ನು ನೆನಪಿಸಿಕೊಂಡರು. ವೃತ್ತಿಯಿಂದ ನಿವೃತ್ತರಾದರೂ ಶೈಕ್ಷಣಿಕ ರಂಗದ ಸೇವೆಯನ್ನು ಮುಂದುವರಿಸುವುದಾಗಿ ಅವರು ಹೇಳಿದರು.
ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲಾ ಅಧ್ಯಾಪಕ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ಬಿ.ಆರ್.ಸಿ ತರಬೇತುದಾರ ಕೃಷ್ಣ ಪ್ರಕಾಶ ವಂದಿಸಿದರು. ಶಿಕ್ಷಕಿಯರಾದ ಭಾಗ್ಯಲಕ್ಷ್ಮೀ, ಶೈಲಜ, ಶ್ರೀಲತ ಪ್ರಾರ್ಥನೆ ಹಾಡಿದರು. ರಾಜಾರಾಮ ರಾವ್ ಟಿ. ಮೀಯಪದವು ಕಾರ್ಯಕ್ರಮ ನಿರೂಪಿಸಿದರು.