ಮುಳ್ಳೇರಿಯ: ಸಂಗೀತದಿಂದ ಆತ್ಮ ಸಂತೋಷ, ಮನಸ್ಸಿಗೆ ದೃಢತೆ, ಸಂಯಮ ಸಾಧ್ಯ. ಹಿಂದೂ ಧರ್ಮದ ಸಂಸ್ಕøತಿಯ ಅಂಗಗಳಲ್ಲಿ ಒಂದು ಸಂಗೀತ. ಕಲಾವಿದನಿಗಿಂತ ಕಲೋಪಾಸಕರು ಕಲೆಯನ್ನು ಪ್ರಭುತ್ವಗೊಳಿಸುವಂತವರು ಎಂದು ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಹೇಳಿದರು.
ರಾಗಸುಧಾರಸ ಕಾಸರಗೋಡು ಇದರ ನೇತೃತ್ವದಲ್ಲಿ ಮುಳ್ಳೇರಿಯ ವಿದ್ಯಾಶ್ರೀ ಶಿಕ್ಷಣ ಕೇಂದ್ರದ ಸಹಕಾರದೊಂದಿಗೆ ಗುರುವಾರ ಮುಳ್ಳೇರಿಯದ ಗಣೇಶ ಕಲಾ ಮಂದಿರದಲ್ಲಿ ಆರಂಭಗೊಂಡ ಕರ್ನಾಟಕ ಶಾಸ್ತ್ರೀಯ ಸಂಗೀತ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ರಂಗನಾಥ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಕಲೈಮಾಮಣಿ ವಿದ್ವಾನ್ ವಿಠಲ್ ರಾಮಮೂರ್ತಿ ಚೆನ್ನೈ, ಗಣೇಶ ವತ್ಸ ಮಾತನಾಡಿದರು.
ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಪ್ರಭಾಕರ ಕುಂಜಾರು ಸ್ವಾಗತಿಸಿ, ವಂದಿಸಿದರು. ಕೋಳಿಕ್ಕಜೆ ಬಾಲಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು. ನಾಲ್ಕು ದಿನಗಳ ಕಾಲ ನಡೆಯುವ ಶಿಬಿರದಲ್ಲಿ ವಿವಿಧ ಪ್ರದೇಶದ ನೂರರಷ್ಟು ಮಂದಿ ಭಾಗವಹಿಸುತ್ತಿದ್ದಾರೆ. ಹಾಗೆಯೇ ವಿಠಲ ರಾಮಮೂರ್ತಿಯವರ ಶಿಷ್ಯೆ ಪಾವನಿ ಅನುಪಿಂಡಿ, ಮಕ್ಕಳಾದ ವಿಜಯಶ್ರೀ ಮತ್ತು ಶ್ರೀಹರಿ ಭಾಗವಹಿಸುತ್ತಿದ್ದಾರೆ.
ಮೇ 12ರಂದು ಮಧ್ಯಾಹ್ನ 3ಕ್ಕೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಡಾ.ಶಂಕರ್ ರಾಜ್ ಆಲಂಪಾಡಿ ಅಧ್ಯಕ್ಷತೆ ವಹಿಸುವರು. ಡಾ. ಶ್ರೀಪತಿ ಕಜಂಪಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಂಗೀತ ಕಲಾನಿಧಿ ಪದ್ಮಭೂಷಣ ಟಿ.ವಿ.ಶಂಕರನಾರಾಯಣನ್ ಚೆನ್ನೈ, ಕಲೈಮಾಮಣಿ ವಿಠಲ್ ರಾಮಮೂರ್ತಿ ಚೆನ್ನೈ ಭಾಗವಹಿಸುವರು.
ಸಂಜೆ 4ಕ್ಕೆ ನಡೆಯುವ ಕರ್ನಾಟಕ ಸಂಗೀತ ಕಛೇರಿಯಲ್ಲಿ ಹಾಡುಗಾರಿಕೆಯಲ್ಲಿ ಕಲಾನಿಧಿ ಟಿ.ವಿ.ಶಂಕರನಾರಾಯಣನ್ ಚೆನ್ನೈ, ವಯಲಿನ್‍ನಲ್ಲಿ ಕಲೈಮಾಮಣಿ ವಿಠಲ್ ರಾಮಮೂರ್ತಿ ಚೆನ್ನೈ, ಮೃದಂಗದಲ್ಲಿ ವಿದ್ವಾನ್ ನೈವೇಲಿ ನಾರಾಯಣನ್ ಚೆನ್ನೈ, ಘಟಂನಲ್ಲಿ ವಿದ್ವಾನ್ ಜಿ.ಎಸ್.ರಾಮಾನುಜಂ ಮೈಸೂರು ಭಾಗವಹಿಸುವರು.