ಕಾಸರಗೋಡು: ಪ್ರಜಾಪ್ರಭುತ್ವದ ತೀರ್ಪು ನಿರ್ಧರಿಸುವ ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಕ್ಕೆ ಇನ್ನು ಒಂದು ವಾರ ಬಾಕಿಯಿರುತ್ತಾ ಮತಯಂತ್ರಗಳನ್ನು ಸೂಕ್ಷ್ಮ ಭದ್ರತೆಯಲ್ಲಿರಿಸುವ ಪ್ರಕ್ರಿಯೆಯೂ ಈ ಅವಧಿ ವರೆಗೆ ಮುಂದುವರಿಯಲಿದೆ.
ಮತದಾನ ನಡೆದ ನಂತರ ಮತಯಂತ್ರಗಳನ್ನು ಪಡನ್ನಕ್ಕಾಡ್ ಆಟ್ರ್ಸ್ ಆಂಡ್ ಸಯನ್ಸ್ ಕಾಲೇಜಿನ ಸ್ಟ್ರಾಂಗ್ ರೂಂನಲ್ಲಿ ಬಿಗಿ ಭದ್ರತೆಯಲ್ಲಿ ಇರಿಸಲಾಗಿದೆ.
ಕಾಸರಗೋಡು ಲೋಕಸಭಾ ಕ್ಷೇತ್ರದ 7 ವಿಧಾನಸಭೆ ಕ್ಷೇತ್ರಗಳ ಮತಯಂತ್ರಗಳನ್ನು ಇಲ್ಲಿ ಇರಿಸಲಾಗಿದೆ. 15 ಸ್ಟ್ರಾಂಗ್ ರೂಂ ಗಳಲ್ಲಿ ತ್ರಿಸ್ತರ ಸುರಕ್ಷಾ ವಿಧಾನದಲ್ಲಿ ಇರಿಸಲಾಗಿದೆ. ಕೇಂದ್ರ ಸೇನೆ, ರಾಜ್ಯ ಪೊಲೀಸ್ ಮತ್ತು ಎಕ್ಸಿಕ್ಯೂಟಿವ್ ಮೆಜಿಸ್ಟ್ರೇಟ್ ಎಂಬ ರೀತಿಯ ಸುರಕ್ಷಾ ಕ್ರಮ ನಡೆಸುತ್ತಿವೆ.
ಸ್ಟ್ರಾಂಗ್ ರೂಂ ಇರುವ ಕಡೆ ಸಿ.ಆರ್.ಪಿ.ಎಫ್.ನ 84 ಸೈನಿಕರು ಏಕಕಾಲಕ್ಕೆ ಸರಕ್ಷೆಯ ಹೊಣೆ ನಿರ್ವಹಿಸುತ್ತಿದ್ದಾರೆ. ಕಾಲೇಜು ಕ್ಯಾಂಪಸ್ ಒಳಗೆ ಕೇರಳ ಸಶಸ್ತ್ರ ಪೊಲೀಸ್ ನ 29 ಸಿಬ್ಬಂದಿ ಕೌಂಪೌಂಡ್ ನ ಹೊರಬದಿ ಕಾವಲು ನಡೆಸುತ್ತಿದ್ದಾರೆ. ಒಬ್ಬ ಡಿವೈ ಎಸ್ ಪಿ ನೇತೃತ್ವದಲ್ಲಿ 16 ಸ್ಥಳೀಯ ಪೊಲೀಸರು 24 ತಾಸುಗಳ ಬಿಗಿಭದ್ರತೆ ನೀಡುತ್ತಿದ್ದಾರೆ.
ಕಾಸರಗೋಡು ಸರಕಾರಿ ಕಾಲೇಜಿನ ಮತ್ತು ಪಡನ್ನಕ್ಕಾಡ್ ನೆಹರೂ ಆಟ್ರ್ಸ್ ಆಂಡ್ ಸಯನ್ಸ್ ಕಾಲೇಜಿನ ಸ್ವೀಕಾರ ಕೇಂದ್ರಗಳ ಮೂಲಕ ಮತಯಂತ್ರಗಳು ಏ.24ರಂದು ಮುಂಜಾನೆ 5 ಗಂಟೆಗೆ ಸ್ಟ್ರಾಂಗ್ ರೂಂಗೆ ವರ್ಗಾಯಿಸಲಾಗಿತ್ತು. ಜಿಲ್ಲಾ ಚುನಾವಣೆ ಅಧಿಕಾರಿಯಾಗಿರುವ, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಕ್ಷೇತ್ರದ ಒಬ್ಸರ್‍ವರ್ ಎಸ್.ಗಣೇಶ್, ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ವಿ.ಪಿ.ಅಬ್ದುರಹಮಾನ್, 7 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಅಧಿಕಾರಿಗಳು, ಅಭ್ಯರ್ಥಿಗಳ ಪ್ರತಿನಿಧಿಗಳು ಮೊದಲಾದವರ ಸಮಕ್ಷದಲ್ಲಿ ಸ್ಟ್ರಾಂಗ್ ರೂಂನಲ್ಲಿ ಮತಯಂತ್ರಗಳನ್ನು ಇರಿಸಿ ಭದ್ರವಾಗಿ ಮುಚ್ಚಿ ಸೀಲ್ ಮಾಡಲಾಗಿತ್ತು. ಮತಗಣನೆಯ ದಿನವಾಗಿರುವ ಮೇ 23ರಂದೇ ಈ ಸ್ಟ್ರಾಂಗ್ ರೂಂ ಗಳನ್ನು ತೆರೆಯಲಾಗುವುದು.